ಹೈದರಾಬಾದ್: ರಾಮೋಜಿ ಫಿಲ್ಮ್ ಸಿಟಿ ನಿರ್ಮಿಸಿದ್ದ ರಾಮೋಜಿ ರಾವ್ ಅವರು ಇಂದು ನಿಧನ ಹೊಂದಿದ್ದಾರೆ. ಅವರ ನಿಧನ ವಾರ್ತೆ ಕೇಳಿ ಪ್ರಧಾನಿ ನರೇಂದ್ರ ಮೋದಿ, ನಟರಾದ ಅಲ್ಲು ಅರ್ಜುನ್, ರಾಮ್ ಚರಣ್, ನಿರ್ದೇಶಕ ರಾಜಮೌಳಿ ಸೇರಿ ಅನೇಕರು ಸಂತಾಪ ಸೂಚಿಸಿದ್ದಾರೆ.
ತೆಲುಗಿನಲ್ಲಿ ಟ್ವೀಟ್ ಮಾಡಿರುವ ಮೋದಿ, `ರಾಮೋಜಿ ರಾವ್ ನಿಧನವು ತುಂಬಾ ದುಃಖಕ ತಂದಿದೆ. ಅವರು ಭಾರತೀಯ ಮಾಧ್ಯಮಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದರು. ಅವರ ದಣಿವರಿಯದ ಪ್ರಯತ್ನಗಳ ಮೂಲಕ, ಅವರು ಮಾಧ್ಯಮ ಮತ್ತು ಮನರಂಜನೆಯ ಜಗತ್ತಿನಲ್ಲಿ ನಾವೀನ್ಯತೆಯಲ್ಲಿ ಶ್ರೇಷ್ಠತೆಗಾಗಿ ಹೊಸ ಮಾನದಂಡಗಳನ್ನು ತಂದರು’ ಎಂದಿದ್ದಾರೆ.
`ರಾಮೋಜಿ ರಾವ್ ಅವರು ಭಾರತದ ಅಭಿವೃದ್ಧಿಯ ಬಗ್ಗೆ ತುಂಬಾ ಉತ್ಸುಕರಾಗಿದ್ದರು. ಅವರೊಂದಿಗೆ ಮಾತುಕತೆ ನಡೆಸಲು ಮತ್ತು ಅವರ ಅಪಾರ ಜ್ಞಾನದಿಂದ ಪ್ರಯೋಜನ ಪಡೆಯುವ ಅನೇಕ ಅವಕಾಶಗಳನ್ನು ಹೊಂದಲು ನಾನು ಅದೃಷ್ಟಶಾಲಿಯಾಗಿದ್ದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಆಳವಾದ ಸಂತಾಪ. ಓಂ ಶಾಂತಿ’ ಎಂದು ಮೋದಿ ಬರೆದಿದ್ದಾರೆ.
ಅಲ್ಲು ಅರ್ಜುನ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. `ನಾನು ಅತಿ ಹೆಚ್ಚು ಗೌರವಿಸುವ ಪ್ರವರ್ತಕ ಮತ್ತು ಸ್ಫೂರ್ತಿದಾಯಕ ದಾರ್ಶನಿಕ ರಾಮೋಜಿ ರಾವ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ನಾನು ಸಿನಿಮಾ ಮತ್ತು ಇತರ ಹಲವು ಉದ್ಯಮಗಳಿಗೆ ಅವರ ಅಪ್ರತಿಮ ಕೊಡುಗೆಗಳನ್ನು ಎಂದಿಗೂ ಮರೆಯಲಾಗುವುದಿಲ್ಲ. ಮಹಾನ್ ಆತ್ಮಕ್ಕೆ ಶಾಂತಿ ಸಿಗಲಿ’ ಎಂದಿದ್ದಾರೆ ಅಲ್ಲು ಅರ್ಜುನ್.ರಾಮ್ ಚರಣ್ ಅವರು ಶೂಟಿಂಗ್ ಸೆಟ್ನಲ್ಲೇ ಸಂತಾಪ ಕೋರಿದ್ದಾರೆ. ನಿರ್ದೇಶಕ ರಾಜಮೌಳಿ ಅವರು ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ.