ಮಾಲೂರು: ಶಾಸಕ ಕೆ.ವೈ.ನಂಜೇಗೌಡ ಹಾಗೂ ಅವರ ಧರ್ಮಪತ್ನಿ ರತ್ನಮ್ಮ ನಂಜೇಗೌಡ ಅವರ ವಿವಾಹ ವಾರ್ಷಿಕೋತ್ಸವ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಟಿ ಶ್ರೀನಿವಾಸ್ ಜಯಗಳಿಸಿದ ಹಿನ್ನೆಲೆಯಲ್ಲಿ ಮುಖಂಡರು ಹಾಗೂ ಅವರ ಅಭಿಮಾನಿಗಳು ಶಾಸಕ ಕೆ.ವೈ.ನಂಜೇಗೌಡ ದಂಪತಿಗಳನ್ನು ಕೊಮ್ಮನಹಳ್ಳಿ ಗ್ರಾಮದ ಅವರ ನಿವಾಸದಲ್ಲಿ ಅಭಿನಂದಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ವೈ.ನಂಜೇಗೌಡ ತಾಲೂಕಿನಲ್ಲಿ ಜನತೆಯ ಆಶೀರ್ವಾದದಿಂದ ಎರಡನೇ ಅವರಿಗೆ ಶಾಸಕರಾಗಿ ಆಯ್ಕೆಯಾಗಿದ್ದು ಕ್ಷೇತ್ರದ ಅಭಿವೃದ್ಧಿ ಹಾಗೂ ಜನರಿಗೆ ಸ್ಪಂದಿಸಿ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಮೂಲಕ ತಾಲೂಕಿನ ಜನತೆಯ ಋಣ ತೀರಿಸಲಾಗುವುದು ಎಂದ ಅವರು, ನಾನು ತಾಲೂಕಿನಲ್ಲಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಹಾಗೂ ನನ್ನ ಕುಟುಂಬ ವರ್ಗದವರ ಹೆಚ್ಚಿನ ಶ್ರಮವಿದೆ ನಮ್ಮ ಕುಟುಂಬವನ್ನು ಗ್ರಾಮ ಪಂಚಾಯಿತಿ ಸದಸ್ಯನಿಂದ ಎರಡನೇ ಅವಧಿಗೆ ಶಾಸಕರಾಗಿ ಆಯ್ಕೆಯಾಗಲು ತಾಲೂಕಿನ ಜನತೆಯ ಆಶೀರ್ವಾದವೇ ಕಾರಣವಾಗಿದೆ ಎಂದರು.
ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಿರಿಯ ಐಎಎಸ್ ನಿವೃತ್ತ ಅಧಿಕಾರಿ ಡಿ.ಟಿ.ಶ್ರೀನಿವಾಸ ಅವರು ಸ್ಪರ್ಧಿಸಿದ್ದರು, ತಾಲೂಕಿನಲ್ಲಿ ಎಲ್ಲಾ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷಕರ ಸಹಕಾರವನ್ನು ಕೋರಲಾಗಿತ್ತು, ಅದರಂತೆ ಎಲ್ಲಾ ಶಿಕ್ಷಕರು ನನ್ನ ಮೇಲೆ ನಂಬಿಕೆ ಹಾಗೂ ವಿಶ್ವಾಸವಿಟ್ಟು ಡಿ ಟಿ ಶ್ರೀನಿವಾಸ್ ಅವರಿಗೆ ಹೆಚ್ಚಿನ ಮತಗಳನ್ನು ನೀಡಿ ಅವರ ಗೆಲುವಿಗೆ ಕಾರಣರಾಗಿದ್ದಾರೆ.
ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ಡಿ.ಟಿ.ಶ್ರೀನಿವಾಸ ಅವರು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಶಿಕ್ಷಣ ಕ್ಷೇತ್ರದ ಬದಲಾವಣೆ ಹಾಗೂ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಾರೆ ಎಂದರು.ನಮ್ಮ ಕುಟುಂಬದಲ್ಲಿ ಯಾವುದೇ ರೀತಿಯ ಕಾರ್ಯಕ್ರಮಗಳಾದರೂ ಸಹ ನನ್ನ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಮುಖಂಡರು ಭಾಗಿಯಾಗಿ ಶುಭ ಹಾರೈಸುತ್ತಾರೆ ಮುಂಬರುವ ದಿನಗಳಲ್ಲಿಯೂ ಸಹ ತಾಲೂಕಿನ ಜನತೆಯ ಆಶೀರ್ವಾದ ನನ್ನ ಮೇಲೆ ಇದ್ದರೆ ರಾಜ್ಯದಲ್ಲಿ ನಮ್ಮದೇ ಆದ ಕಾಂಗ್ರೆಸ್ ಪಕ್ಷದ ಸರ್ಕಾರ ಆಡಳಿತದಲ್ಲಿರುವುದರಿಂದ ಸರ್ಕಾರದಿಂದ ಹೆಚ್ಚುವರಿ ಅನುದಾನಗಳನ್ನು ತಂದು ರಸ್ತೆಗಳ ಅಭಿವೃದ್ಧಿ ಸೇರಿದಂತೆ ಇನ್ನಿತರ ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜ ಅಧ್ಯಕ್ಷ ಹನುಮಂತಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಪಿ.ನಾರಾಯಣ
ಸ್ವಾಮಿ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ವಿ.ಮುನೇಗೌಡ, ತಾಲೂಕು ಯಾದವ ಸಂಘದ ಅಧ್ಯಕ್ಷ ಎ ಗೋವಿಂದಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವಿಕುಮಾರ್, ಗ್ರಾಪಂ ಸದಸ್ಯ ಲಿಂಗಾಪುರ ಕೃಷ್ಣಪ್ಪ, ಪ್ರಾ.ಶಿ.ಸ.ಗೌ.ಅ ಆರ್.ನರಸಿಂಹ, ಶಿಕ್ಷಕರುಗಳಾದ ವೆಂಕಟಪ್ಪ, ಸಂಜೀವಪ್ಪ, ಶಶಿಧರ್, ಚಿಕ್ಕವೆಂಕಟೇಶ್, ಮುನಿರಾಜು, ಮಂಜಪ್ಪ, ನವೀನ್, ಚಂದ್ರಶೇಖರ್, ಇನ್ನಿತರರು ಹಾಜರಿದ್ದರು.