ಬೇಲೂರು: ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಗೆಲುವಿಗೆ ಕಾರಣರಾದ ಬೇಲೂರು ವಿದಾನಸಭಾ ಕ್ಷೇತ್ರದ ಮತದಾರರಿಗೆ, ಪಕ್ಷದ ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ಪಕ್ಷದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ನಿಶಾಂತ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಶುಕ್ರವಾರ ಮಾತನಾಡಿದ ಅವರು, 2024ರ ಹಾಸನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶ್ರೇಯಸ್ ಪಟೇಲ್ ವಿರುದ್ಧ ವಿರೋಧ ಪಕ್ಷದ ಅಭ್ಯರ್ಥಿ ಬೇಲೂರು ಕ್ಷೇತ್ರದಲ್ಲಿ 20 ರಿಂದ 25 ಸಾವಿರ ಲೀಡ್ ಪಡೆಯುತ್ತಾರೆ ಎಂದಿದ್ದರು. ಆದರೆ ಕಳೆದ ವಿಧಾನಸಭಾ ಚುನಾವಣೆಗಿಂದ ಈ ಬಾರಿ ಹೆಚ್ಚು ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದು, ಮುಂದಿನ ವಿಧಾನಸಭೆ ಸೇರಿದಂತೆ ಇತರೆ ಚುನಾವಣೆಗಳನ್ನು ದೈರ್ಯವಾಗಿ ಎದುರಿಸುವುದಕ್ಕೆ ನಮಗೆ ಬಲ ಬಂದಿದೆ. ಸರ್ಕಾರದ ಗ್ಯಾರೆಂಟಿ ಯೋಜನೆಗಳು ಮತದಾರರಿಗೆ ತಲುಪಿದ್ದು, ಕ್ಷೇತ್ರದ ಮತದಾರರು ನಮಗೆ ಹೆಚ್ಚು ಮತ ನೀಡಿದ್ದು ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಯ್ಯದ್ ತೌಫಿಕ್ ಮಾತನಾಡಿ, ಕಳೆದ ವಿದಾನಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯಾಗಿದ್ದ ಬಿ.ಶಿವರಾಂರವರು ಸೋತರು ದೃತಿಗೆಡದೆ ಎರಡೇ ದಿನದಿಂದಲೇ ಪುನ: ಕ್ಷೇತ್ರದಾಧ್ಯಂತ ಓಡಾಡಿ ಪಕ್ಷ ಸಂಘಟಿಸುತಿದ್ದಾರೆ. ಯಾವುದೇ ಜಾತಿ ಧರ್ಮ ಎನ್ನದೆ ಎಲ್ಲ ವರ್ಗದವರನ್ನು ವಿಶ್ವಾಸಕ್ಕೆ ಪಡೆದು ಕಷ್ಟ ಸುಖಗಳಲ್ಲಿ ಬಾಗವಹಿಸಿ ಜನರ ಸೇವೆಯಲ್ಲಿ ತೊಡಗಿರುವುದರಿಂದ ಮತ್ತು ಎಲ್ಲರೂ ಸಂಘಟನಾತ್ಮಕವಾಗಿ ಕೆಲಸ ಮಾಡಿದ್ದರಿಂದ ಪಕ್ಷಕ್ಕೆ ಹೆಚ್ಚು ಮತಗಳು ಬಂದಿದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲವಾಗಿದೆ.
ಜತೆಗೆ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೂ ಇದೇ ರೀತಿ ಸಂಘಟನಾತ್ಮಕವಾಗಿ ಚುನಾವಣೆ ಎದುರಿಸಿ ಗೆಲುವು ಸಾಧಿಸುತ್ತೇವೆ ಎಂದರು.ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ರಾಜ್ಯ ಹಿಂದುಳಿದ ವರ್ಗದ ಕಾರ್ಯದರ್ಶಿ ಬಿ.ಎಂ.ರಂಗನಾಥ್, ಹಳೇಬೀಡು-ಜಾವಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆನಂದ್ ದೇಶಾಣಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಾಗರಾಜ್ ಇದ್ದರು.