ಕನಕಪುರ: ಲೋಕಸಭಾ ಚುನಾವಣೆಯ ದೃಷ್ಟಿಯಿಂದ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ರವರು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು ಅದರಲ್ಲಿ ಯಾವುದೇ ಕಾರಣಕ್ಕೂ ಕರ್ನಾಟಕ ದಲ್ಲಿ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂಬ ಅಂಶವನ್ನು ಬಿಡುಗಡೆಗೊಳಿಸಿರುವುದು ದುರದೃಷ್ಟ ಹಾಗೂ ಅತ್ಯಂತ ಖಂಡನೀಯ ಎಂದು ತಾಲ್ಲೂಕು ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ತಿಳಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಐ.ಎನ್.ಡಿ.ಎ ಮೈತ್ರಿಕೂಟದ ಮಿತ್ರ ಪಕ್ಷವಾಗಿರುವ ಡಿಎಂಕೆ ಪಕ್ಷದ ಈ ನಡೆ ತೀವ್ರ ಬೇಸರ ತರಿಸಿದ್ದು ಒಂದೆಡೆ ಕರ್ನಾಟಕದಲ್ಲಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ತಿಂಗಳು ಗಟ್ಟಲೆ ಇಡೀ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ನೃತ್ಯ ಮಾಡಿಕೊಂಡು ಮೇಕೆದಾಟು ಪಾದಯಾತ್ರೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವು ಕನ್ನಡಿಗರ ಆಶಾ ಭಾವನೆಯನ್ನು ಮತವನ್ನಾಗಿಸಿಕೊಂಡು,
ಅಧಿಕಾರಕ್ಕೆ ಬಂದು ಈಗ ಮೇಕೆದಾಟು ಯೋಜನೆಯನ್ನು ಸಂಪೂರ್ಣವಾಗಿ ಮರೆ ತಿರುವುದು ಒಂದು ದುರಂತವೇ ಸರಿ,ಮತ್ತೊಂದೆಡೆ ಅದರ ಮಿತ್ರ ಪಕ್ಷವಾಗಿರುವ ಡಿಎಂಕೆ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಮೇಕೆದಾಟು ಅಣೆಕಟ್ಟು ಕಟ್ಟಲು ನಾವು ಬಿಡುವುದಿಲ್ಲ ಎಂಬ ಅಂಶವನ್ನು ಹೇಳಿರುವುದು ಕನ್ನಡಿಗ ರ ಸ್ವಾಭಿಮಾನವನ್ನು ಕೆಣಕಿದಂತಾಗಿದೆ,ಕೆಲವು ದಿನಗಳ ಹಿಂದೆ ಸುಳ್ಳು ಹೇಳಿ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸಿದ ಕಾಂಗ್ರೆಸ್ ಸರಕಾರವು ಈಗ ಡಿಎಂಕೆ ಪಕ್ಷದ ನಿಲುವನ್ನು ಖಂಡಿಸದೆ ಗುಲಾಮಗಿರಿತನ ತೋರಿಸುತ್ತಿರು ವುದು ಅ ಪಕ್ಷದ ನಾಯಕರು ಇಬ್ಬಗೆ ನೀತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದ ಜನತೆ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರೆ ಅದರ ಮಿತ್ರಕೂಟದ ಮೆಕೆದಾಟು ನಿರ್ಮಾಣ ತಡೆ ಸಂಕಲ್ಪ ಕ್ಕೆ ನಾವೇ ಅಂದರೆ ಕನ್ನಡಿಗರು ಒಪ್ಪಿಗೆ ಸೂಚಿಸಿದಂತಾಗುತ್ತದೆ ಅಲ್ಲವೇ, ಆದ್ದರಿಂದ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ತಕ್ಷಣವೇ ಮೇಕೆದಾಟು ವಿಚಾರದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿ ಡಿಎಂಕೆ ಪಕ್ಷವನ್ನು ತನ್ನ ಮೈತ್ರಿಯಿಂದ ಹೊರ ಹಾಕಲು ತಾಲ್ಲೂಕು ಪ್ರಗತಿಪರ ಸಂಘಟನೆಗಳು 7 ದಿನ ಗಳ ಕಾಲ ಗಡುವನ್ನು ನೀಡುತ್ತಿದ್ದು,
ಇದನ್ನು ನಿರ್ಲಕ್ಷಿಸಿದರೆ ಅನಂತರ ಎಲ್ಲಾ ಸಂಘಟನೆಗಳ ನಾಯಕರ ಸಭೆ ಕರೆದು ಇಡೀ ರಾಜ್ಯದಲ್ಲಿ ಮಿತ್ರಪಕ್ಷದ ನಿಲುವಿಗೆ ಅಂಟಿಕೊಂಡು ಕನ್ನಡಿಗರಿಗೆ ಮೋಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ದ ಮತ ಚಲಾಯಿಸುವಂತೆ ರಾಜ್ಯಾವ್ಯಾಪಿ ಆಂದೋಲನ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗುವುದು ಎಂದರು.ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡ ಭಾಸ್ಕರ್, ಕೆ ಆರ್ ಎಸ್ ಪಕ್ಷದ ಪ್ರಶಾಂತ್ ಹೊಸದುರ್ಗ, ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂ ಗಿ ಗಿರಿಯಪ್ಪ, ರೈತ ಘಟಕದ ನಲ್ಲಹಳ್ಳಿ ಶ್ರೀನಿವಾಸ್, ಶಿವರಾಜ್ , ಅಸ್ಗರ್ , ದುರ್ಗೇಶ್, ಹಾಗೂ ಮಿಲ್ಟ್ರಿ ರಾಮಣ್ಣ ಉಪಸ್ಥಿತರಿದ್ದರು.