This is the title of the web page
This is the title of the web page

ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಶಾಸಕ ಶರತ್ ಬಚ್ಚೇಗೌಡ

ಹೊಸಕೋಟೆ: ರಾಜ್ಯದಲ್ಲಿ ಬಿಜೆಪಿ ವಿರೋಧಿ ಆಲೆಯಿದ್ದು ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು. ಅವರು ತಾಲೂಕಿನ ದೇವಮೂಲೆ ಎಂದು ಪ್ರಸಿದ್ಧಿ ಪಡೆದಿರುವ ನಂದಗುಡಿ ಹೋಬಳಿಯ ದಳಸಗೆರೆ ಗ್ರಾಮದಲ್ಲಿ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಕ್ಷೇತ್ರದಲ್ಲಿ ಈ ಭಾರಿ ಚುನಾವಣೆಗೆ ನನ್ನ ವಿರುದ್ದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಹೈ ಕಮಾಂಡ್ ಸಾಕಷ್ಟು ಭಾರಿ ಯೋಜನೆ ಮಾಡಿ ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್ ನೀಡಿದೆ. ಸಾಮಾನ್ಯವಾಗಿ ಹೊತ್ತು ಹುಟ್ಟುವ ವೇಳೆಗೆ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡ್ತಾರೆ. ಆದರೆ ಬಿಜೆಪಿ ಹೊತ್ತು ಮುಳುಗಿದ ಮೇಲೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಹೊತ್ತು ಮುಳುಗಿದಂತೆ ಬಿಜೆಪಿ ಪಕ್ಷ ಮುಳುಗಲಿದೆ.

ಹೊಸಕೋಟೆಯಲ್ಲಿ ಸಹ ಬಿಜೆಪಿ ಅಭ್ಯರ್ಥಿಯನ್ನು ಹಾಕಲು ಸಾಕಷ್ಟು ಯೋಚನೆ ಮಾಡಿ ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್ ಕೊಟ್ಟಿದೆ. ನನ್ನ ಪ್ರತಿಸ್ಪರ್ಧಿ ಯಾರೇ ಆಗಲಿ ಈ ಭಾರಿ ಚುನಾವಣೆಯಲ್ಲಿ ಜನಪರ ಆಡಳಿತ ನೀಡುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲಿದ್ದು, ರಾಜ್ಯದಲ್ಲೂ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ತಮ್ಮ ಅಧಿಕಾರವಧಿಯಲ್ಲಿ ತಾಲೂಕಿನಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳೆ ತಮಗೆ ಶ್ರೀರಕ್ಷೆಯಾಗಲಿದೆ ಎಂದರು.

ಎಂಟಿಬಿ ನಾಗರಾಜ್ ಅವರು ತಮ್ಮ ಮಗನಿಗೆ ಟಿಕೆಟ್ ಕೊಡಿಸಲು ಹರಸಾಹಸ ಮಾಡಿದ್ದರೂ ಸಹ ಪ್ರಯೋಜನ ವಾಗಿಲ್ಲ. ಈ ಭರದಲ್ಲಿ ಕ್ಷೇತ್ರದಲ್ಲಿ ಮೂರ್ನಾಲ್ಕು ತಿಂಗಳಲ್ಲಿ ಸುತ್ತಾಟ ಮಾಡಿಸಿ, ಅಂತಿಮವಾಗಿ ಟಿಕೆಟ್ ಕೊಡಿಸಲು ವಿಫಲರಾದರು. ಇನ್ನು ಅವರನ್ನು ನಂಬಿರುವ ಕಾರ್ಯಕರ್ತರನ್ನು ಯಾವ ರೀತಿ ರಾಜಕೀಯವಾಗಿ ಬೆಳೆಸುತ್ತಾರೆ ಎಂಬುದನ್ನು ಅರಿಯಬೇಕು. ಆದ್ದರಿಂದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‍ಗೆ ಬನ್ನಿ, ರಾಜಕೀಯ ವಾಗಿ ಸ್ಥಾನಮಾನ ಕೊಟ್ಟು ನಿಮ್ಮನ್ನು ಬೆಳೆಸುತ್ತೇವೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಾನು ಈ ಭಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದು, ಏಪ್ರಿಲ್ 17ರ ಸೋಮವಾರದಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರವನ್ನು ಸಲ್ಲಿಕೆ ಮಾಡುತ್ತಿದ್ದೇನೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿ ನನಗೆ ಆಶೀರ್ವಾದ ಮಾಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಮನವಿ ಮಾಡಿದರು.

ಕೆಪಿಸಿಸಿ ಪ್ರ.ಧಾನ ಕಾರ್ಯದರ್ಶಿ ಚೀಮಂಡಹಳ್ಳಿ ಮುನಿಶಾಮಣ್ಣ ಮಾತನಾಡಿ ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರವನ್ನು ಅನುಭವಿಸಿ ಪಕ್ಷಕ್ಕೆ ದ್ರೋಹ ಬಗೆದು ಹೋಗಿರುವವರಿಗೆ ಈ ಭಾರಿಯ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು. ಶರತ್ ಬಚ್ಚೇಗೌಡರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟು ಅವರ ಗೌರವವನ್ನು ಕಾಪಾಡಿದೆ. ಕ್ಷೇತ್ರದ ಮತದಾರರು ಅವರನ್ನು ಗೆಲ್ಲಿಸುವ ಮೂಲಕ ಪಕ್ಷದ ವಿಜಯಪತಾಕೆಯನ್ನು ಹಾರಿಸಲು ಶ್ರಮಿಸಬೇಕು. ಕೇಂದ್ರ, ರಾಜ್ಯ ಸರಕಾರಗಳು ಜನರ ಹಿತವನ್ನು ಕಾಪಾಡಲು ಸಂಪೂರ್ಣ ವಿಫಲವಾಗಿದ್ದು ಈ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ.ಗೋಪಾಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಗೀರ್ ಅಹಮದ್, ಬಚ್ಚೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೈ.ಎಸ್. ಮಂಜುನಾಥ್, ಮಾದಾರ ಮಹಾಸಭಾ ಅಧ್ಯಕ್ಷ ಎಚ್.ಎಂ.ಸುಬ್ಬರಾಜ್ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.