ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಚರ್ಚೆಗೆ ಅವಕಾಶ ಮಾಡಿಕೊಡ ಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ
ನಾಯಕ ಆರ್. ಅಶೋಕ್ ವಿಧಾನಸಭೆಯಲ್ಲಿಂದು ಸಭಾಧ್ಯಕ್ಷ ಯುಟಿ ಖಾದರ್ ಅವರಿಗೆ ಮನವಿ ಮಾಡಿದ ಸಂದರ್ಭದಲ್ಲಿ ಆಡಳಿತ ಪ್ರತಿಪಕ್ಷಗಳ ನಡುವೆ ವಾಗ್ದಾಳಿ ನಡೆದು ಗದ್ದಲದ ಪರಿಸ್ಥಿತಿ ನಿರ್ಮಾಣವಾಯಿತು.
ಮುಂದುವರೆದು ಮಾತನಾಡಿದ ಅಶೋಕ್, ಬೆಳಗಾವಿ ಅಧಿವೇಶನದಲ್ಲೇ ಚರ್ಚೆಯಾಗಬೇಕಿತ್ತು ಆದರೆ ತಾವು ವಿರೋಧ ಪಕ್ಷದವರ ಎತ್ತಿದ ಪ್ರಶ್ನೆಗೆ ಗಮನ ನೀಡದೆ ಆಡಳಿತ ಪಕ್ಷದ ಕಡೆ ವಾಲಿದಿರಿ ಎಂದು ಹೇಳಿದ ಅವರು, ಮಹಿಳೆಯ ಬೆತ್ತಲೆ ಪ್ರಕರಣ, ಹಾವೇರಿಯಲ್ಲಿ ಸಾಮೂಹಿಕ ಅತ್ಯಾಚಾರ, ಕುಕ್ಕರ್ ಬಾಂಬ್ ಬ್ಲಾಸ್ಟ್…
ಮೊದಲಾದ ಘಟನೆಗಳು ರಾಜ್ಯದ ಜನರನ್ನು ಆತಂಕಕ್ಕೆ ದೂಡಿವೆ, ಸರ್ಕಾರ ಬದುಕಿದೆಯೋ ಸತ್ತಿದೆಯೋ ಅಂತ ಜನರು ಅಂದುಕೊಳ್ಳುವ ಮಟ್ಟಿಗೆ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದರು. ಕಳೆದ ಬಾರಿಯಂತೆ ಆ ಕಡೆ ತಿರುಗದೆ ತಮ್ಮ ಕಡೆ ತಿರುಗಿ ಅಂತ ಅಶೋಕ ಹೇಳುವಾಗ ಉತ್ತರಿಸಲು ಎದ್ದುನಿಂತ ಗೃಹ ಸಚಿವ ಜಿ ಪರಮೇಶ್ವರ್, ಅಧ್ಯಕ್ಷರು ಎಡ ಬಲ ಯಾವ ಕಡೆಯೂ ತಿರುಗೋದು ಬೇಡ ನೇರವಾಗಿ ನೋಡಲಿ ಎಂದರು.
ಒಂದು ಹಂತದಲ್ಲಿ ಕಲಾಪಪಟ್ಟಿಯಲ್ಲಿರುವಂತೆ ಚರ್ಚೆಗೆ ಅವಕಾಶ ಕೊಡಿ ಎಂದು ಕಾಂಗ್ರೆಸ್ ಸದಸ್ಯರು ಆಗ್ರಹಪಡಿಸಿದರು.
ಈ ಸಂದರ್ಭದಲ್ಲಿ ಆಡಳಿತ ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಒಟ್ಟಾರೆ ಇಂದು ಸದನ ಆರಂಭಗೊಳ್ಳುತ್ತಿದ್ದಂತೆ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಒಂದು ಹಂತದಲ್ಲಿ ಮಾತನಾಡಿದ ಸಭಾಧ್ಯಕ್ಷರು ಈಗಾಗಲೇ ನಿಲುವಳಿ ಚರ್ಚೆ ಮೇಲೆ ಮಾತನಾಡಲು ಕೊಬ್ಬರಿ ಬೆಲೆಗೆ ಸಂಬಂಧಪಟ್ಟಂತೆ ನೋಟೀಸ್ ನೀಡಿದ್ದಾರೆ. ಮೊದಲು ಅವರ ನೋಟಿಸ್ ಬಂದಿರುವುದರಿಂದ ಅವರಿಗೆ ಮಾತನಾಡಲು ಅವಕಾಶ ನೀಡುತ್ತೇನೆ. ನಾಳೆ ನೀವು ಮತ್ತೆ ಹೊಸದಾಗಿ ನೋಟಿಸ್ ನೀಡಿ ಎಂದು ಅಶೋಕ್ಗೆ ಸೂಚಿಸಿದರು.