ಶಿಡ್ಲಘಟ್ಟ: ಸಂವಿಧಾನ ಅರಿವು ಮೂಡಿಸುವ ರಾಜ್ಯ ಸರ್ಕಾರದ ಮಹತ್ವದ ಕಾರ್ಯಕ್ರಮ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದು, ತಾಲೂಕಿನ ವೈ.ಹುಣಸೇಹಳ್ಳಿಯಲ್ಲಿ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಜಗದೀಶ್ ಮತ್ತು ಸಿಬ್ಬಂದಿ ವರ್ಗ ಬೈಕ್ ರೈಡ್ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ತಹಸೀಲ್ದಾರ್ ಮತ್ತು ತಾಪಂ ಇಒ ನೇತೃತ್ವದಲ್ಲಿ ನಡೆದ ತಾಲ್ಲೂಕು ಮಟ್ಟದ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ನಂತರ ತಮ್ಮ ಕಚೇರಿ ಸಿಬ್ಬಂದಿಯನ್ನು ಬೈಕ್ ರೈಡ್ ಮಾಡಿಸಿದರು. ನೀಲಿ ದ್ವಜ ಮತ್ತು ರಾಷ್ಟ್ರಧ್ವಜವನ್ನು ಬೈಕುಗಳಿಗೆ ಕಟ್ಟಿಕೊಂಡು ವೈ ಹುಣಸೇನಹಳ್ಳಿ ಗ್ರಾಮ ಪಂಚಾಯಿತಿ ಬಳಿ ಸೇರಿದರು.
ಇಲಾಖೆಯ ಕಚೇರಿ ಸಿಬ್ಬಂದಿ ಮತ್ತು ನಿಲಯದ ಪಾಲಕರು ಶಿರಸ್ತ್ರಾಣ ಧರಸಿ ದ್ವಿಚಕ್ರವಾಹನಗಳಲ್ಲಿ ಗ್ರಾಮದ ಮುಖ್ಯಬೀದಿಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಅರಿವು ಮೂಡಿಸುವ ಪ್ರಚಾರ ನಡೆಸಿದರು. ಗ್ರಾಮಾಂತರ ಸಂತೆ ದಿನವಾಗಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ದ್ವಿಚಕ್ರವಾಹನ ಸವಾರರ ಮೆರವಣಿಗೆಯನ್ನು ಸಾರ್ವಜನಿಕರು ಆಶ್ಚರ್ಯ ಚಿಕಿತರಾಗಿ ನೋಡಿದರು. ನಾಳೆ ಬರುವ ಸಂವಿಧಾನ ಜಾಗೃತಿ ಜಾಥಾ ರಥವನ್ನು ತಾವು ಬರಮಾಡಿಕೊಂಡು ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ತಿಳಿಸಿದರು.