ತುಮಕೂರು: ಮಹಾನಗರ ಪಾಲಿಕೆಯ 14ನೇ ವಾರ್ಡ್ ವ್ಯಾಪ್ತಿಗೆ ಒಳಪಡುವ ಮಾರಿಯಮ್ಮ ನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಶಾಸಕರ ನಿಧಿಯಿಂದ ನೂತನವಾಗಿ ಸ್ಥಾಪಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಲೋಕಾರ್ಪಣೆ ಮಾಡಿದರು.
ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಜ್ಯೋತಿಗಣೇಶ್ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಸರ್ಕಾರದ ರೀತಿಯಲ್ಲೇ ಜನಸಾಮಾನ್ಯರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡುತ್ತಿದೆ. ಇದರಿಂದ ಜನಸಾಮಾನ್ಯರಿಗೆ ತುಂಬಾ ಅನುಕೂಲವಾಗುತ್ತದೆ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗಡೆಯವರು ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದದಿಂದ ಬಡಜನರಿಗೆ ಶಿಕ್ಷಣ, ಶುದ್ಧ ಕುಡಿಯುವ ನೀರು, ಮನೆಗಳ ನಿರ್ಮಾಣ, ಕೆರೆ ಕಟ್ಟೆ ಅಭಿವೃದ್ಧಿ ಹಾಗೂ ದೇವಾಲಯಗಳ ಜೀರ್ಣಾದ್ಧಾರ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಇದರಿಂದ ರಾಜ್ಯದ ಹಲವಾರು ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಜನರಿಗೆ ತುಂಬಾ ಪ್ರಯೋಜನಗಳಾಗಿವೆ ಎಂದು ತಿಳಿಸಿದರು.
ಮಾರಿಯಮ್ಮ ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರ್ಮಾಣ ಮಾಡಲಾಗಿರುವ ಕುಡಿಯುವ ನೀರಿನ ಘಟಕಕ್ಕೆ ಶಾಸಕ ನಿಧಿಯಿಂದ ಸಹಕಾರ ನೀಡಲಾಗಿದೆ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ಪ್ರಾಸ್ತಾವಿಕ ನುಡಿಗಳನ್ನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಇದುವರೆಗೆ ರಾಜ್ಯಾದ್ಯಂತ 619 ಹಾಗೂ ತುಮಕೂರು ಜಿಲ್ಲೆಯಲ್ಲಿ 106 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಿದೆ. ಜಿಲ್ಲೆಯಲ್ಲಿ ಇದು 106ನೇ ಘಟಕವಾಗಿದೆ ಎಂದರು.
ತುಮಕೂರು ನಗರದಲ್ಲಿ ಈವರೆಗೆ 15 ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಶಾಸಕರ ಮುತುವರ್ಜಿಯೇ ಕಾರಣ ಎಂದು ಅವರು ತಿಳಿಸಿದರು.
ಧರ್ಮಸ್ಥಳ ಕ್ಷೇತ್ರ 800 ವರ್ಷಗಳ ಇತಿಹಾಸ ಹೊಂದಿರುವ ಕ್ಷೇತ್ರ. ಶ್ರೀಕ್ಷೇತ್ರದಲ್ಲಿ ಅನ್ನದಾನ, ವಿದ್ಯಾದಾನ ನಿರಂತರವಾಗಿ ನಡೆಯುತ್ತಿದೆ ಎಂದ ಅವರು ಶ್ರೀಕ್ಷೇತ್ರದ ಗ್ರಾಮಾಭಿವೃದ್ಧಿ ಯೋಜನೆಯು ಜಿಲ್ಲೆಗೆ ಕಾಲಿಟ್ಟು 15 ವರ್ಷಗಳಾಗಿವೆ. ಅಂದಿನಿAದ ಇಂದಿನವರೆಗೂ ಸಂಸ್ಥೆಯೂ ಬಡವರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದರು.
ಧರ್ಮಸ್ಥಳ ಸಂಸ್ಥೆಯವರು ಸಾಲ ಕೊಡುತ್ತಾರೆ ಎಂದು ಹೇಳುತ್ತಾರೆ. ಇದು ಸುಳ್ಳು, ನಮ್ಮ ಸಂಸ್ಥೆ ಯಾರಿಗೂ ಸಹ ಸಾಲ ಕೊಡುವುದಿಲ್ಲ. ಬದಲಾಗಿ ಬ್ಯಾಂಕ್ನವರು ಸಾಲ ಕೊಡುತ್ತಾರೆ. ಅತಿ ಕಡಿಮೆ ದರದಲ್ಲಿ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಕೊಡಿ ಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೆರೆ ಕಟ್ಟೆಗಳನ್ನು ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ಜಿಲ್ಲೆಯಾದ್ಯಂತ 102 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೆರೆಗಳಿಂದ ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿ, ಪಕ್ಷಿ ಸೇರಿದಂತೆ ಎಲ್ಲಾ ಜೀವ ಸಂಕುಲಕ್ಕೆ ಅನುಕೂಲವಾಗುತ್ತಿದ ಎಂದು ಹೇಳಿದರು.
700 ಕಡೆಗಳಲ್ಲಿ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಪಾಟ್ಗಳನ್ನು ಇಡುವ ಕೆಲಸ ಮಾಡಲಾಗಿದೆ. 12100 ಶಾಲೆಗಳಿಗೆ ಡೆಸ್ಕ್, ಬೆಂಚ್ ವಿತರಣೆ ಮಾಡಲಾಗಿದೆ. 13500 ಅಧಿಕ ದೇವಾಲಯಗಳ ಜೀರ್ಣೋದ್ಧಾರ, 5500 ಹಾಲಿನ ಡೇರಿಗಳಿಗೆ ಅನುದಾನ ಕೊಡಲಾಗಿದೆ. 18 ಸಾವಿರ ಜನರಿಗೆ ಮಾಸಾಶನ, 700ಕ್ಕೂ ಅಧಿಕ ಮನೆಗಳ ನಿರ್ಮಾಣ ಮಾಡಲಾಗಿದ್ದು, ಜಿಲ್ಲೆ ವ್ಯಾಪ್ತಿಯಲ್ಲಿ ಇದುವರೆಗೂ 68 ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದೇವೆ ಎಂದರು.
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಬಡ ವರ್ಗದ ಜನರಿಗೆ ಅನುಕೂಲ ಕಲ್ಪಿಸುವ ಸಂಕಲ್ಪವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹೊಂದಿದೆ ಎಂದರು.
ಮಾರಿಯಮ್ಮ ನಗರದಲ್ಲಿ ಇಂದು ಉದ್ಘಾಟನೆಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕ ಜಿಲ್ಲೆಯಲ್ಲಿ 106ನೇ ಘಟಕವಾಗಿದೆ. ನಗರದ 24,300 ಕುಟುಂಬಗಳು ಈ ನೀರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ 5.88 ಲಕ್ಷ ಲೀಟರ್ ನೀರು ಬಳಕೆಯಾಗುತ್ತಿದೆ. ಹಾಗೆಯೇ ರಾಜ್ಯದಲ್ಲಿ 1.50 ಲಕ್ಷ ಕುಟುಂಬಗಳಿಗೆ 30 ಲಕ್ಷಕ್ಕೂ ಅಧಿಕ ಲೀಟರ್ ಶುದ್ಧ ನೀರು ಕೊಡುವ ಕೆಲಸವನ್ನು ಸಂಸ್ಥೆ ವತಿಯಿಂದ ಮಾಡಿದ್ದೇವೆ ಎಂದು ಅವರು ವಿವರಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಇಂಜಿನಿಯರ್ ಸಂದೀಪ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಭಾಕರ್, ಬಿಜೆಪಿ ವಾರ್ಡ್ ಅಧ್ಯಕ್ಷ ಮಧು, ಮುಂಖಡರಾದ ಜಿಯಾವುಲ್ಲಾ ಸೇರಿದಂತೆ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ, ಶ್ರೀ ಮಾರಿಯಮ್ಮ ಯುವಕರ ಸಂಘ ಹಾಗೂ ಜೈಭೀಮ್ ಯುವಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತುಮಕೂರು ಜಿಲ್ಲೆಯಲ್ಲಿ 106 ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ: ಶಾಸಕ ಜಿ.ಬಿ. ಜ್ಯೋತಿಗಣೇಶ್



