This is the title of the web page
This is the title of the web page

175 ಲಕ್ಷ ರೂ. ವೆಚ್ಚದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಭವನ ನಿರ್ಮಾಣ

ಕೋಲಾರ: ನಗರದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖಾ ಕಟ್ಟಡವನ್ನು ರೂ.175.00 ಲಕ್ಷಗಳಲ್ಲಿ ನವೀಕರಿಸಲು ಉದ್ದೇಶಿಸಲಾಗಿದ್ದು, ಅತಿ ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ತಿಳಿಸಿದರು.

ನಗರದಲ್ಲಿ ಶುಕ್ರವಾರ ನವೀಕರಣದ ಉದ್ದೇಶಕ್ಕಾಗಿ ಹಳೆ ಕಟ್ಟಡವನ್ನು ತೆರವುಗೊಳಿಸಲು ನಡೆದ ಸಾಂಪ್ರದಾಯಿಕ ಪೂಜೆಯಲ್ಲಿ ಪಾಲ್ಗೊಂಡು ಕಟ್ಟಡ ತೆರವಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 16 ಸಾವಿರ ಸರ್ಕಾರಿ ನೌಕರರಿದ್ದು, ಇಷ್ಟೊಂದು ನೌಕರರ ಸಭೆ, ಸಮಾರಂಭಗಳನ್ನು ನಡೆಸಲು ಸುಸಜ್ಜಿತವಾದ ಭವನ ಇಲ್ಲವಾಗಿದೆ, ಈ ನಿಟ್ಟಿನಲ್ಲಿ ಹಳೆ ಕಟ್ಟಡ ನೆಲಸಮಗೊಳಿಸಿ, ಅದೇ ಜಾಗದಲ್ಲಿ ಸುಸಜ್ಜಿತ ಭವನ, ಸಭಾಂಗಣ, ಕೊಠಡಿಗಳು, ಮಳಿಗೆ ನಿರ್ಮಿಸುವ ಪ್ರಯತ್ನ ನಡೆಸಿರುವುದಾಗಿ ತಿಳಿಸಿದರು.

ಈಗಾಗಲೇ ಹಳೆ ಕಟ್ಟಡದ ಜಾಗದಲ್ಲಿ ಸುಂದರ ಭವನ ನಿರ್ಮಿಸಲು ನಕ್ಷೆ ಸಿದ್ದವಾಗಿದೆ, ರಾಜ್ಯ ನೌಕರರ ಸಂಘದ ಅಧ್ಯಕ್ಷರೂ ಅನುಮತಿ ನೀಡಿದ್ದಾರೆ ಎಂದ ಅವರು, ಅತಿ ಶೀಘ್ರ ಹಳೆ ಕಟ್ಟಡ ನೆಲಸಮ ಕಾರ್ಯ ನಡೆಯಲಿದ್ದು, ಇದಾದ ಕೂಡಲೇ ಶಿಲಾನ್ಯಾಸ ನಡೆಸಲು ಕ್ರಮವಹಿಸುವುದಾಗಿ ತಿಳಿಸಿದರು.

ಕಟ್ಟಡವನ್ನು ದಾನಿಗಳ ನೆರವಿನಿಂದ ಸುಸಜ್ಜಿತವಾಗಿ ನಿರ್ಮಿಸಲು ನಿರ್ಧರಿಸಿದ್ದು, ಹಲವಾರು ಮಂದಿ ನೆರವು ಒದಗಿಸಲು ಮುಂದೆ ಬಂದಿದ್ದಾರೆ ಎಂದರು. ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರ ನಿಧಿಯಿಂದಲೂ ನೆರವು ಕೋರಲಾಗಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ ಜತೆಗೆ ಹಲವಾರು ನೌಕರರು ಆರ್ಥಿಕ ನೆರವು ನೀಡಲು ಮುಂದೆ ಬಂದಿದ್ದಾರೆ ಎಂದರು.

ಇದರ ಜತೆಗೆ ನೌಕರರು ಮತ್ತು ಅವರ ಕುಟುಂಬದವರ ಕ್ಷೇಮಾಭ್ಯುದಯಕ್ಕಾಗಿ ನಗರ ಹೊರವಲಯದಲ್ಲಿ 5 ಎಕರೆ ಜಾಗ ಮಂಜೂರಾತಿಗೆ ಕೋರಿದ್ದು, ಅದು ಶೀಘ್ರ ಮಂಜೂರಾದರೆ ಅಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಿಸುವ ಉದ್ದೇಶವಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟವನ್ನು ಮಾರ್ಚ್ ಮೊದಲವಾರ ನಡೆಸಲು ತೀರ್ಮಾನಿಸಲಾಗಿದೆ ಎಂದ ಅವರು, ಈಗಾಗಲೇ ಜಿಲ್ಲಾಮಟ್ಟದಲ್ಲಿ ಆಯ್ಕೆಯಾಗಿರುವ ನೌಕರರು ನಿರಂತರ ಅಭ್ಯಾಸ ನಡೆಸುವ ಮೂಲಕ ಸಿದ್ದತೆ ನಡೆಸಿಕೊಳ್ಳಲು ಮನವಿ ಮಾಡಿದರು.

ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಎಲ್ಲಾ ನೌಕರರು ರಾಜ್ಯಮಟ್ಟಕ್ಕೆ ಅರ್ಹರಾಗಿದ್ದು, ಉತ್ತಮ ಪ್ರದರ್ಶನದ ಮೂಲಕ ಜಿಲ್ಲೆಯ ಘನತೆ ಹೆಚ್ಚಿಸಲು ಮನವಿ ಮಾಡಿದರು. ಜಿಲ್ಲಾ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, 16 ಸಾವಿರ ನೌಕರರಿರುವ ಸಂಘಟನೆಗೆ ಸುಸಜ್ಜಿತ ಕಟ್ಟಡದ ಅಗತ್ಯವಿದೆ, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವ ಸುರೇಶ್‍ಬಾಬು ಮತ್ತವರ ತಂಡ ಶೀಘ್ರ ಕಟ್ಟಡ ನಿರ್ಮಾಣ ಮುಗಿಸುವ ಮೂಲಕ ಭವನವನ್ನು ನೌಕರರಿಗೆ ಅರ್ಪಣೆ ಮಾಡಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ, ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಅಜಯ್‍ಕುಮಾರ್, ಗೌರವಾಧ್ಯಕ್ಷ ರವಿಚಂದ್ರ, ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ನೌಕರ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಎನ್.ಮಂಜುನಾಥ್,ಉಪಾಧ್ಯಕ್ಷರಾದ ಸುಬ್ರಮಣಿ, ನಂದೀಶ್‍ಕುಮಾರ್, ಪುರುಷೋತ್ತಮ್, ಮಂಜುನಾಥ್, ರತ್ನಪ್ಪ, ಜಂಟಿ ಕಾರ್ಯದರ್ಶಿಗಳಾದ ರವಿ,ವಿಜಯಮ್ಮ, ಪದಾಧಿಕಾರಿಗಳಾದ ಶ್ರೀರಾಮ್, ಪಿಡಿಒ ನಾಗರಾಜ್, ಸುಬ್ರಮಣಿ, ಕದಿರಪ್ಪ, ಶಿಕ್ಷಕ ಗೆಳೆಯರ ಬಳಗದ ಆರ್.ಶ್ರೀನಿವಾಸನ್, ಗೋವಿಂದು, ವೆಂಕಟಾಚಲಪತಿಗೌಡ, ವೆಂಕಟರಾಂ, ಕೃಷ್ಣಪ್ಪ, ಚಿಕ್ಕಣ್ಣ ಮತ್ತಿತರರು ಉಪಸ್ಥಿತರಿದ್ದರು.