ರಿಯಾದ್ (ಸೌದಿ ಅರೇಬಿಯಾ): ಜಗತ್ತಿನ ಅತ್ಯಾಧುನಿಕ ಕಟ್ಟಡಗಳ ನಿರ್ಮಾಣಗಳಲ್ಲಿ ನಿರತರಾಗಿರುವ ಅರಬ್ಬರ ನಾಡಿನಲ್ಲಿ ಹೊಸತೊಂದು ಕೌತುಕ ಸದ್ಯದಲ್ಲೇ ಸೃಷ್ಟಿಯಾಗಲಿದೆ. ನೆಲದಿಂದ ಸುಮಾರು ೧,೧೪೮ ಅಡಿಗಳ ಎತ್ತರದಲ್ಲಿ ಒಂದು ಫುಟ್ಬಾಲ್ ಕ್ರೀಡಾಂಗಣವನ್ನು ನಿರ್ಮಿಸಲು ಸೌದಿ ಅರೇಬಿಯಾ ಸರ್ಕಾರ ನಿರ್ಧರಿಸಿದೆ. ಇದನ್ನು ಗಾಳಿಯಲ್ಲಿ ತೇಲುವ ಕ್ರೀಡಾಂಗಣದಂತೆ ನಿರ್ಮಿ ಸಬೇಕೆಂಬುದು ಸೌದಿ ಸರ್ಕಾರದ ಕನಸಾಗಿದ್ದು ದೊಡ್ಡ ಬಜೆಟ್ ನಲ್ಲಿ ಜಗತ್ತಿನಲ್ಲಿ ಈಗ ಲಭ್ಯವಿರುವ ಎಲ್ಲಾ ತಂತ್ರಜ್ಞಾನಗಳನ್ನು ಬಳಸಿಕೊಂಡು ಹಣ ಎಷ್ಟೇ ಖರ್ಚಾಗಲಿ ಅದನ್ನು ಮಾಡಿಯೇ ತೀರಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.
ಸೌದಿ ಅರೇಬಿಯಾಕ್ಕೆ ೨೦೩೪ ಫುಟ್ಬಾಲ್ ವಿಶ್ವಕಪ್ ಆತಿಥ್ಯ ಸಿಕ್ಕಿದೆ. ಅಷ್ಟರೊಳಗಾಗಿ ಗಾಳಿಯಲ್ಲಿ ತೇಲುವ ಕ್ರೀಡಾಂಗಣವನ್ನು ನಿರ್ಮಿಸಿ ಅದರಲ್ಲೇ ೨೦೩೪ರ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯವನ್ನು ಆಡಿಸಲು ಸೌದಿ ಅರೇಬಿಯಾ ಸರ್ಕಾರ ಕನಸು ಕಾಣುತ್ತಿದೆ. ಆ ಕನಸಿನ ಸಾಕಾರಕ್ಕಾಗಿಯೇ ಈಗ ಆ
ಮಹಾತ್ಸಾಧನೆಯನ್ನು ಮಾಡಲು ಸೌದಿ ಸರ್ಕಾರ ಮುಂದಾಗಿದೆ.
ಸ್ಟೇಡಿಯಂ ನಿರ್ಮಾಣದ ಪ್ರಾಥಮಿಕ ಹಂತದಲ್ಲಿ ಎರಡು ದೊಡ್ಡ ಆಕಾಶದೆತ್ತರದ ಗೋಪುರಗಳನ್ನು ನಿರ್ಮಿಸಲಾಗುತ್ತದೆ. ಆ ಎರಡು ಗೋಪುರಗಳ ನಡುವೆ ಕ್ರೀಡಾಂಗಣವನ್ನು ಕಟ್ಟಿ ಅದನ್ನು ತೊಟ್ಟಿಲ ರೀತಿಯಲ್ಲಿ ಆ ಎರಡೂ ಗೋಪುರಗಳ ನಡುವೆ ತೂಗಿಹಾಕಲಾಗುತ್ತದೆ. ಆದರೆ, ಇದನ್ನು ಸೌದಿಯಲ್ಲಿ ಆಗಾಗ ಬೀಸುವ
ಬಿರುಗಾಳಿಗಳನ್ನು ತಾಳಿಕೊಂಡು ಒಂದಿಷ್ಟೂ ಅಲುಗಾಡದಂತೆ ನಿರ್ಮಿಸಲು ಉದ್ದೇಶಿಸಲಾಗಿದೆ. ಸುಮಾರು ೪೬,೦೦೦ ಮಂದಿ ಕೂರಬಹುದಾದಷ್ಟು ಆಸನಗಳನ್ನು ಆ ಸ್ಟೇಡಿಯಂನಲ್ಲಿ ಅಳವಡಿಸಲಾಗುತ್ತದೆ. ಎರಡು ಆಕಾಶದೆತ್ತರದ ಗೋಪುರಗಳ ನಡುವೆ ತೊಟ್ಟಿಲಿನಂತೆ ನೆಲದಿಂದ ಸುಮಾರು ೧,೧೪೦ ಅಡಿ ಎತ್ತರದಲ್ಲಿ ತೂಗಾಡುವ ಈ ಕ್ರೀಡಾಂಗಣಕ್ಕೆ ಅದೇ ಗೋಪುರಗಳ ಮೂಲಕವೇ ಸಾಗಲು ಅವಕಾಶವಿರುತ್ತದೆ.
ಎರಡೂ ಗೋಪುರಗಳಲ್ಲಿ ಹೈ ಸ್ಪೀಡ್ ಲಿಫ್ಟ್ ಗಳು, ಆ ಗೋಪುರದಿಂದ ಈ ಗೋಪುರಕ್ಕೆ ಸಾಗಲು ಆಟೋಮೇಟೆಡ್ ಪಾಡ್ ಗಳನ್ನು ನಿರ್ಮಿಸಲಾಗುತ್ತದೆ. ಕ್ರೀಡಾಂಗಣದ ಲೈಟಿಂಗ್ ನಿಂದ ಹಿಡಿದು ಗೋಪುರಗಳ ಲಿಫ್ಟ್ ಗಳು, ಆಟೋಮೇಟೆಡ್ ಪಾಡ್ ಗಳಿಗೆ ಬೇಕಾಗುವ ವಿದ್ಯುತ್ತನ್ನು ಸೌರಶಕ್ತಿ ಹಾಗೂ ನವೀಕರಿಸಬಹುದಾದ ಇಂಧನಗಳಿಂದ ಪಡೆಯಲು ನಿರ್ಧರಿಸಲಾಗಿದೆ.



