ಬೆಂಗಳೂರು: ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆ ಸಂಬಂಧ ತಲೆದೋರಿರುವ ಬಿಕ್ಕಟ್ಟು ಮೇಲ್ನೋಟಕ್ಕೆ ತಿಳಿಯಾಗಿದೆ ಎಂದು ಹೇಳಲಾಗುತ್ತಿದ್ದರೂ, ಒಳಗಿಂದೊಳಗೆ ಪಕ್ಷದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ನಿನ್ನೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಕೋಲಾರ ಜಿಲ್ಲೆಯ ಪ್ರಮುಖ ಮುಖಂಡರೊಂದಿಗೆ ಸಮಾಲೋಚನೆ ಸಭೆ ನಡೆದು ಸಚಿವ ಕೆ.ಎಚ್. ಮುನಿಯಪ್ಪ ವಿರುದ್ಧ ಅಸಮಾಧಾನ ಹೊರ ಹಾಕಿದ್ದ ನಾಯಕರನ್ನು ಸಮಾಧಾನ ಪಡಿಸುವಲ್ಲಿ ಸಿಎಂ ಡಿಸಿಎಂ ಯಶಸ್ವಿಯಾಗಿದ್ದರು. ಆದರೆ ಕೋಲಾರ ಕ್ಷೇತ್ರದ ಪಕ್ಷದ ಅಭ್ಯರ್ಥಿ ಯಾರೆಂಬುದು ಇನ್ನು ಘೋಷಣೆಯಾಗಿಲ್ಲ.
ಮತ್ತೊಂದೆಡೆ ಸಚಿವ ಕೆ. ಎಚ್ ಮುನಿಯಪ್ಪ ತಮ್ಮ ಅಳಿಯನಿಗೆ ಟಿಕೆಟ್ ದೊರೆಯ ಬೇಕೆಂದು ತಾಳಿದ್ದ ಬಿಗಿ ಪಟ್ಟನ್ನು ಇನ್ನು ಸಡಿಲಿಸಿದಂತೆ ಕಾಣುತ್ತಿಲ್ಲ. ಇಂದು ಸಹ ತಮ್ಮ ಅಭಿಪ್ರಾಯವನ್ನು ಹೊರ ಹಾಕಿರುವ ಅವರು ರಾಜ್ಯದ ಬಹುತೇಕ ಕ್ಷೇತ್ರಗಳ ಗೊಂದಲವನ್ನು ತಿಳಿಗೊಳಿಸಲಾಗಿದೆ. ಆದರೆ ಕೋಲಾರದಲ್ಲಿ ಮಾತ್ರ ಯಾಕೆ ಆಗುತ್ತಿಲ್ಲ ಎಂದು ಪ್ರಶ್ನಿಸುವ ಮೂಲಕ ಮುಖ್ಯಮಂತ್ರಿ ಅವರನ್ನು ಪರೋಕ್ಷವಾಗಿ ಆಗ್ರಹ ಪಡಿಸಿದ್ದಾರೆ.
ಎರಡು ಗುಂಪುಗಳು ಪ್ರಸ್ತಾಪಿಸಿರುವ ಅಭ್ಯರ್ಥಿಗಳನ್ನು ಕೈಬಿಟ್ಟು ಮೂರನೇ ಅವರನ್ನು ಆಯ್ಕೆ ಮಾಡಲು ಯತ್ನ ನಡೆದಿದೆ ಎಂದು ಹೇಳಲಾಗುತ್ತಿದ್ದು, ಹಾಗೇನಾದರೂ ಆದರೆ ಉದ್ಯಮಿ ವಿ. ನಾರಾಯಣ ಸ್ವಾಮಿ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಕೆ.ವಿ.ಗೌತಮ್ ಅವರ ಹೆಸರು ಸಹ ಮುಂಚೂಣಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.