ಭಾರತೀಯ ದರ್ಶನ ಶಾಸ್ತ್ರದಲ್ಲಿ ಸನಾತನ ಧರ್ಮದ ಪ್ರತೀಕವಾದ ದ್ವೈತ, ಅದ್ವೈತ ಮತ್ತು ವಿಶಿಷ್ಟಾದ್ವೈತಗಳು ಬಹಳ ಪ್ರಮುಖ ಮತಗಳಾಗಿವೆ. ಮೊದಲಿಗರು ಆದಿ ಶಂಕರಾಚಾರ್ಯರು, ಅವರ ಕಾಲದ ಬಗೆಗೆ ಹಲವಾರು ಮತಗಳಿವೆ. ಕೆಲವರು 5,6 ನೇ ಶತಮಾನವೆಂದರೆ 8ನೇ ಶತಮಾನ ಎಂಬುದು ಸಾಮಾನ್ಯವಾಗಿ ಪ್ರಚಲಿತವಾಗಿರುವ ಸತ್ಯ. ಕೇರಳದ ಕಾಲಡಿಯಲ್ಲಿ ಜನಿಸಿದ ಶಂಕರರು ಗುರು ಗೌಡಪಾದರಲ್ಲಿ ದೀಕ್ಷೆ ಪಡೆದು ಸನ್ಯಾಸಿಗಳಾದರು.
ಅದ್ವೈತ ಸಿದ್ಧಾಂತವನ್ನು ದೇಶದ ಉದ್ದಗಲಕ್ಕೂ ಪ್ರಚಾರ ಮಾಡಿದರು, ದೇಶದಾದ್ಯಂತ ಶೃಂಗೇರಿ ಶಾರದಾ ಪೀಠವನ್ನು ಸ್ಥಾಪಿಸಿದರು. ಇನ್ನು ಶ್ರೀ ರಾಮಾನುಜಾಚಾರ್ಯರು ಹನ್ನೊಂದನೆ ಶತಮಾನದ ಮೊದಲ ಭಾಗದಲ್ಲಿ ಜನಿಸಿದವರು ಅವರು ವಿಶಿಷ್ಟಾದ್ವೈತವನ್ನು ಪ್ರತಿಪಾದಿಸಿದರು ಮತ್ತು ಭಾರತದಾದ್ಯಂತ ತಮ್ಮ ಸಿದ್ಧಾಂತವನ್ನು ಪ್ರಚಾರ ಮಾಡುವದಲ್ಲದೇ ಬಹಳಷ್ಟು ಕಡೆಗಳಲ್ಲಿ ದೇವಾಲಯಗಳನ್ನು ಸ್ಥಾಪಿಸಿ ಸನಾತನ ವೈದಿಕ ಧರ್ಮದ ಪ್ರಚಾರ ಮಾಡಿದವರು.
ಆಚಾರ್ಯರ ಕಾರ್ಯ ಆಧ್ಯಾತ್ಮಿಕ ಪ್ರಪಂಚಕ್ಕೆ ಬಹಳ ದೊಡ್ಡ ಕೊಡುಗೆಯಾಗಿದೆ. ಕಲಿಯುಗದ ಆರಂಭದಿಂದ ವೈದಿಕ ಧರ್ಮವನ್ನು ಅಲ್ಲಗಳೆಯುವ ಅನೇಕ ಅವೈದಿಕ ಮತಗಳು ಹುಟ್ಟಿಕೊಂಡು ಎಲ್ಲವೂ ನಶ್ವರ ದೇವರು ಇಲ್ಲ ಎಂದು ಪ್ರಚಾರ ಮಾಡುತ್ತಾ ಇದ್ದ ಎಲ್ಲ ಮತಗಳನ್ನು ಖಂಡಿಸಿ ಪುನಃ ವೈದಿಕ ಧರ್ಮ ಹಿಂದು ಧರ್ಮದ ಅಸ್ತಿತ್ವ ಉಳಿಯಲು ಕಾರಣರಾದವರು. ಅದರಲ್ಲಿ ಬೌದ್ಧ ಧರ್ಮದ ನೈರಾತ್ಮ ವಾದ ಎಂದರೆ ದೇಹ ಆತ್ಮ ಬೇರೆ ಅಲ್ಲ. ನಾವು ಬದುಕಿರುವವರೆಗೆ ಮಾತ್ರ ಆತ್ಮ ನಂತರ ಯಾವುದೂ ಇಲ್ಲ ಎಂದು ಪ್ರತಿಪಾದಿಸಿ ಜನರಲ್ಲಿ ನಾಸ್ತಿಕತೆ ಅರಾಜಕತೆಯ ಅಲೆ ಎಬ್ಬಿಸಿದ್ದರು.
ಚಾರ್ವಾಕರೂ ಕೂಡ ಅವರದ್ದು ಹೆಚ್ಚು ಕಡಿಮೆ ಇದೇ ವಾದ ದೇಹವೇ ಆತ್ಮ ದೇಹವಿದ್ದಾಗ ಮಾತ್ರ ಜೀವನ ಅದರ ನಂತರ ಜೀವನ ಇರುವುದಿಲ್ಲ. ಪಾಪ ಪುಣ್ಯಗಳು ಇಲ್ಲ. ಇರುವವರೆಗೂ ಸುಖದಿಂದ ಬಾಳ ಬೇಕು. ಸಾಲ ಮಾಡಿ ಆದರೂ ತುಪ್ಪ ತಿನ್ನಬೇಕು ಎಂಬ ಸಿದ್ಧಾಂತದವರು. ಇದೇ ರೀತಿ ಭಗವಂತನ ಅಸ್ತಿತ್ವವನ್ನು ನಿರಾಕರಿಸಿದ ಒಟ್ಟು 72 ಮತಗಳನ್ನು ಈ ಇಬ್ಬರೂ ಆಚಾರ್ಯರು ಖಂಡಿಸಿದ್ದಾರೆ. ದೇವಸ್ಥಾನಗಳ ಸ್ಥಾಪನೆ ತಮ್ಮ ಸಿದ್ಧಾಂತದ ಪ್ರಚಾರ ಪ್ರಸಾರ ಮಾಡುವ ಶಿಷ್ಯರನ್ನು ಭಾರತದಾದ್ಯಂತ ನೆಲೆಸುವಂತೆ ಮಾಡಿದರು.
ಅವನತಿಯ ಅಂಚಿನಲ್ಲಿದ್ದ ಸನಾತನ ವೈದಿಕ ಧರ್ಮದ ಪ್ರಚಾರಕ್ಕಾಗಿ ಉಪನಿಷತ್ತುಗಳು ಭಾಷ್ಯಗಳನ್ನು ಬರೆದರು. ವೇದವ್ಯಾಸ ದೇವರ ಗ್ರಂಥಗಳಿಗೆ ವ್ಯಾಖ್ಯಾನಗಳನ್ನು ಬರೆದು ಜನಸಾಮಾನ್ಯರಿಗೆ ದೇವರು ಧರ್ಮ ಮತ್ತು ತಮ್ಮ ಸಿದ್ಧಾಂತಗಳ ಪರಿಚಯವನ್ನು ಮಾಡಿಸಿದವರು. ಹಿಂದು ಧರ್ಮದ ಅಸ್ತಿತ್ವವನ್ನು ಇದುವರೆಗೂ ಉಳಿಯುವಂತೆ ಮಾಡಿರುವುದು ಅವರ ಹೆಗ್ಗಳಿಕೆ.
ಆಚಾರ್ಯರಿಬ್ಬರೂ ದಕ್ಷಿಣ ಭಾರತವರು. ಇಬ್ಬರಿಗೂ ಆಚಾರ್ಯರಿಗೆ ಕರ್ನಾಟಕದೊಂದಿಗೆ ಅವಿನಾಭಾವ ಸಂಬಂಧ ಇದೆ. ಶಂಕರರು ಕೇರಳದಲ್ಲಿ ಹುಟ್ಟಿದರೂ ಆದಿ ಶಂಕರರ ಪೀಠ ಶೃಂಗೇರಿಯಲ್ಲಿ ಇದೆ.
ರಾಮಾನುಜಾಚಾರ್ಯರು ಹುಟ್ಟಿದ್ದು ತಮಿಳುನಾಡಿನಲ್ಲಿ ಆದರೂ ಅಲ್ಲಿ ಅವರಿಗೆ ನೆಲೆ ನಿಲ್ಲಲು ಬಿಡದ ಕಾರಣ ಮೇಲುಕೋಟೆಯಲ್ಲಿ ನೆಲೆ ನಿಂತು ತಮ್ಮ ಕಾರ್ಯ ಕ್ಷೇತ್ರವನ್ನಾಗಿಸಿ ಕೊಂಡರು. ಇಬ್ಬರೂ ಆಚಾರ್ಯರ ಮತದ ಶಿಷ್ಯರು ದೇಶದ ತುಂಬೆಲ್ಲಾ ಹರಡಿದ್ದಾರೆ.
ಶಂಕರಾಚಾರ್ಯರ ಸಿದ್ಧಾಂತ ಅದ್ವೈತ ಸಿದ್ಧಾಂತ. ದ್ವೈತ ಎಂದರೆ ಎರಡು ಅದ್ವೈತ ಎಂದರೆ ಎರಡು ಅಲ್ಲದ್ದು. ಅಹಂ ಬ್ರಹ್ಮಾಸ್ಮಿ ಶಂಕರರ ತತ್ವ. ಜೀವಾತ್ಮ ಪರಮಾತ್ಮ ಬೇರೆ ಅಲ್ಲ.
ಆತ್ಮವು ಸತ್ಯಮಿಕ್ಕೆಲ್ಲವೂ ಮಿಥ್ಯ ಎಂಬುದನ್ನು ಸಾರಿದ್ದಾರೆ. ಅವರು ದೇಶದಲ್ಲಿನಾಲ್ಕು ಕಡೆಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿ
ಸಿದರು, ಉತ್ತರದಲ್ಲಿ ಜ್ಯೋತಿರ್ಮಠ, ದಕ್ಷಿಣದಲ್ಲಿ ಶಾರದಾ ಮಠ, ಪೂರ್ವದಲ್ಲಿ ಗೋವರ್ಧನ ಪೀಠ ಮತ್ತು ಪಶ್ವಿಮದಲ್ಲಿ ದ್ವಾರಕಾ ಪೀಠಗಳನ್ನು ಸ್ಥಾಪಿಸಿ. ವೇದವ್ಯಾಸರ ಬ್ರಹ್ಮ ಸೂತ್ರಗಳಿಗೆ ಶಂಕರ ಭಾಷ್ಯ ಬರೆದು ಅದ್ವೈತ ಸಿದ್ಧಾಂತದ ತತ್ವಗಳನ್ನು ಸಾರುವ ಸಾಮಾನ್ಯ ಜನರಿಗೆ ತಿಳಿಸುವ ಸಲುವಾಗಿ ಬ್ರಹ್ಮಸೂತ್ರ ಭಾಷ್ಯ, ಭಗವದ್ಗೀತೆ, ದಶ ಉಪನಿಷತ್ತುಗಳಾದ ಈಶ, ಕೇನ, ಕಠ, ಪ್ರಶ್ನ, ಮುಂಡಕ, ಮಾಂಡೂಕ್ಯ, ಐತರೇಯ, ತೈತರೀಯ, ಬ್ಹದಾರಣ್ಯಕ, ಛಾಂದೋಗ್ಯ ಭಾಷ್ಯಗಳನ್ನು ಬರೆದು ಅನೇಕ ಪ್ರಸಿದ್ಧ ಶಿಷ್ಯರನ್ನು ಪಡೆದು ಅವರ ಮೂಲಕ ದೇಶದಾದ್ಯಂತ ಪ್ರಚಾರ ಮಾಡಿದರು.
ಶಂಕರರ ಪ್ರಮುಖ ಶಿಷ್ಯರು ಹಸ್ತಾಮಲಕಾಚಾರ್ಯ (ಗೋವರ್ಧನ ಮಠ) ಸುರೇಶಾಚಾರ್ಯ (ಶಾರದಾ ಪೀಠ) ಪದ್ಮಪಾದಾಚಾರ್ಯ (ದ್ವಾರಕಾ ಪೀಠ) ತೋಟಕಾಚಾರ್ಯ (ಜ್ಯೋತಿರ್ ಮಠ) ಹೀಗೆ ನಾಲ್ಕೂ ದಿಕ್ಕುಗಳಲ್ಲಿ ಹಿಂದು ಧರ್ಮದ ಪ್ರಚಾರ ಪ್ರಸಾರವನ್ನು ಆದಿ ಶಂಕರಾಚಾರ್ಯರು ಮಾಡಿದ ಕಾರಣವೇ ಇಂದೂ ಕೂಡ ಭಾರತದಲ್ಲಿ ಹಿಂದೂ ಧರ್ಮದ ಬ್ರಾಹ್ಮಣ್ಯದ ಅಸ್ತಿತ್ವ ಉಳಿದಿದೆ ಏಕೆಂದರೆ ಬೌದ್ಧ ಮತಾದಿಗಳ ಪ್ರಭಾವ ಮತ್ತು ದಬ್ಬಾಳಿಕೆ ಎಷ್ಟಿತ್ತೆಂದರೆ ಆ ಕಾಲದಲ್ಲಿ ಆದಿ ಶಂಕರರು ಮಾಡಿದ ಪ್ರಚಾರ ಮತ್ತು ಸ್ಥಾಪಿಸಿದ ಮಠಗಳು ಹಿಂದೂ ಧರ್ಮದ ಅವನತಿಯನ್ನು ತಡೆಯಲು ಮೂಲ ಕಾರಣ.
ಮುಂದೆ 11ನೇ ಶತಮಾನದಲ್ಲಿ ಬಂದ ರಾಮಾನುಜಾಚಾರ್ಯರದು ವಿಶಿಷ್ಟಾದ್ವೈತ ವಿಶಿಷ್ಟಾದ್ವೈತದ ತತ್ವ ಎಂದರೆ ಜೀವಾತ್ಮ, ಪರಮಾತ್ಮ ಮತ್ತು ಜಡ ವಸ್ತುಗಳು ಬೇರೆ ಬೇರೆ ಆದರೂ ಕೂಡ ಎಲ್ಲವೂ ಒಂದೇ ಅಂದರೆ ವಿಶಿಷ್ಟಾದ್ವೈತವು ದ್ವೈತ ಮತ್ತು ಅದ್ವೈತದ ಸಮನ್ವಯ ಹೇಳುವ ಸಿದ್ಧಾಂತವಾಗಿದೆ. ಶ್ರೀರಾಮಾನುಜಾಚಾರ್ಯರು ದಕ್ಷಿಣ ಭಾರತದಲ್ಲಂತೂ ಅನೇಕ ದೇವಸ್ಥಾನಗಳನ್ನು ಸ್ಥಾಪಿಸಿ ಧರ್ಮದ ಉಳಿವಿಗಾಗಿ ಶ್ರಮಿಸಿದ್ದಾರೆ. ನೀವು ಗಮನಿಸಿದರೆ ದಕ್ಷಿಣ ಭಾರತದಲ್ಲಿ ಶ್ರೀ ವೈಷ್ಣವರ ಅಂದರೆ ವಿಶಿಷ್ಟಾದ್ವೈತ ಅನುಯಾಯಿಗಳು ಪೂಜೆ ಮಾಡುವ ದೇವಸ್ಥಾನಗಳನ್ನು ಹೇರಳವಾಗಿ ಕಾಣಬಹುದು.
ರಾಮಾನುಜಾಚಾರ್ಯರೂ ಕೂಡ ಬ್ರಹ್ಮಸೂತ್ರಗಳಿಗೆ ವಿಶಿಷ್ಟಾದ್ವೈತದ ತತ್ವದ ಭಾಷ್ಯಗಳನ್ನು ಬರೆದಿದ್ದಾರೆ. ಕಾಶ್ಮೀರದ ಸರಸ್ವತೀ ದೇವಿಗೆ ಅರ್ಪಿಸಿದಾಗ ಸರಸ್ವತಿ ದೇವಿಯು ಸ್ವೀಕರಿಸಿ ಹಯಗ್ರೀವ ದೇವರನ್ನು ನೀಡಿ ಅವರ ಭಾಷ್ಯಕ್ಕೆ ಶ್ರೀ ಭಾಷ್ಯ ಎಂದಿದ್ದಾರೆ. ಈ ಹಯಗ್ರೀವ ದೇವರ ಮೂರ್ತಿಯೂ ಇಂದಿಗೂ ಶ್ರೀ ಪರಕಾಲಸ್ವಾಮಿಗಳ ಮಠದಲ್ಲಿ ನೋಡಬಹುದು. ಶ್ರೀ ರಾಮಾನುಜಾಚಾರ್ಯರು ಶ್ರೀರಂಗ, ತಿರುಮಲ-ತಿರುಪತಿ, ಕಾಂಚೀಪುರಂ, ಮಧುರಾಂತಕಂಗಳಲ್ಲಿ ಜೀರ್ಣೋದ್ಧಾರ ಮಾಡಿ ಪೂಜೆಗೆ ವ್ಯವಸ್ಥೆ ಮಾಡಿದರೆ. ಶ್ರೀ ಕೂರ್ಮಂ, ಸಿಂಹಾಚಲ, ಪುರಿ ಜಗನ್ನಾಥ, ಬದರಿಕಾಶ್ರಮ, ನೈಮಿಷಾರಣ್ಯದಲ್ಲಿ ತಮ್ಮ ದೇವಸ್ಥಾನಗಳನ್ನು ನಿರ್ಮಿಸಿ ಅಲ್ಲಿ ಪೂಜೆಯ ಏರ್ಪಾಡು ಮಾಡಿದರು.
ಯದುಗಿರಿಯ ಯತಿರಾಜ ಮಠದಂತಹ ಮಠಗಳನ್ನು ಸ್ಥಾಪಿಸಿ ವೇದಾಂತ ಪ್ರಸಾರಕ್ಕೆ ಅನುಕೂಲ ಮಾಡಿದರು. ಕರ್ನಾಟಕದಲ್ಲಿ ತೊಂಡನೂರಿನ ನಂಬಿನಾರಾಯಣ, ಮೇಲುಕೋಟೆಯ ಚಲುವ ನಾರಾಯಣ, ಬೇಲೂರಿನ ವಿಜಯ ನಾರಾಯಣ, ಗದುಗಿನ ವೀರನಾರಾಣ , ತಲಕಾಡಿನ ಕೀರ್ತಿ ನಾರಾಯಣ ಪಂಚ ನಾರಾಯಣ ಕ್ಷೇತ್ರಗಳನ್ನು ಹೊಯ್ಸಳ ರಾಜ ವಿಷ್ಣುವರ್ಧನನ ಮೂಲಕ ಮಾಡಿಸಿದರು.
ಶಂಕರಾಚಾರ್ಯರ ಜನ್ಮದಿನ ವೈಶಾಖ ಶುದ್ಧ ಪಂಚಮಿಯಾದರೆ, ರಾಮಾನುಜಾಚಾರ್ಯರ ಜನ್ಮ ನಕ್ಷತ್ರ ಮೇಷ ಮಾಸದ ಅರಿದ್ರಾ ನಕ್ಷತ್ರ. ಇಬ್ಬರೂ ಆಚಾರ್ಯರಿಗೆ ನುಡಿ ನಮನಗಳು
Leave a Review