ಬೆಂಗಳೂರು: ಲೈಂಗಿಕ ದೌರ್ಜನ್ಯದ ಪೆನ್ ಡ್ರೈವ್ಗಳನ್ನು ನಕಲಿಸುವುದು ಮತ್ತು ಸೋರಿಕೆ ಮಾಡುವುದೂ ಅತ್ಯಂತ ಅಪಾಯಕಾರಿ ಮತ್ತು ಪಾಪ ಕೆಲಸ ಎಂದು ಹೈಕೋರ್ಟ್ ಸೋಮವಾರ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯದ ಪೆನ್ ಡ್ರೈವ್ಗಳನ್ನು ನಕಲಿಸಿ ಹಂಚಿದ್ದ ಪ್ರಮುಖ ಆರೋಪಿ ಶರತ್ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಈ ಅಭಿಪ್ರಾಯಪಟ್ಟಿದ್ದಾರೆ.ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿಎನ್ ಜಗದೀಶ ಅವರು ಪ್ರಕರಣದಲ್ಲಿ ಶರತ್ ಪಾತ್ರವನ್ನು ಸೂಚಿಸುವ ತನಿಖಾ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇರಿಸಿದರು.
ವಿಶೇಷ ತನಿಖಾ ದಳದ ಅಧಿಕಾರಿಗಳು ಶರತ್ ಅವರಿಗೆ ಸೇರಿದ ಟ್ಯಾಬ್ಲೆಟ್ ಮತ್ತು…ವಿವಿಧ ಸಿಡಿಗಳು, ಡಿವಿಆರ್ ಅನ್ನು ವಶಪಡಿಸಿಕೊಂಡಿದ್ದು, ಶರತ್ ಅವರನ್ನು ಕಸ್ಟಡಿಗೆ ನೀಡುವಂತೆ ಮನವಿ ಮಾಡಿದೆ. ಶರತ್ ಅವರನ್ನು ವಿಚಾರಣೆಗೆ ತೆಗೆದುಕೊಳ್ಳಲು ಕೇವಲ ಮಾಹಿತಿಯಿದ್ದರಷ್ಟೇ ಸಾಕಾಗುವುದಿಲ್ಲ. 30 ದಿನಗಳಾದರೂ ಶರತ್ ವಿರುದ್ಧ ಯಾವುದೇ ಅಪರಾಧಗಳು ಸಾಬೀತಾಗಿಲ್ಲ. ತನ್ನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸುವಂತೆ ಕೋರಿ ಶರತ್ ಹೈಕೋರ್ಟ್ಗೆ ಮೆಟ್ಟಿಲೇರಿದ ಬಳಿಕ ತನಿಖಾ ಸಂಸ್ಥೆ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ವಾದಿಸಿದರು.
ಈ ಪ್ರಕರಣ ರಾಜಕೀಯ ದ್ವೇಷದಿಂದ ಹುಟ್ಟಿಕೊಂಡಿದ್ದು, ಶರತ್ ವಿರುದ್ಧ ಯಾವುದೇ ಆರೋಪಗಳೂ ಇಲ್ಲ ಎಂದೂ ಹೇಳಿದರು.ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಾಲಯವು, ಯಾವ ರಾಜಕೀಯ ದ್ವೇಷ ಇರಲಿ. ಇದನ್ನು ಯಾವುದೇ ವ್ಯಕ್ತಿ ಮಾಡಿದ್ದರೂ ಅದು ಪಾಪದ ಕೆಲಸ. ಇಂತಹ ಕೆಲಸದಿಂದ ಪುರುಷ ಏನನ್ನೂ ಕಳೆದುಕೊಳ್ಳುವುದಿಲ್ಲ. ಆದರೆ, ಮಹಿಳೆ ಅವಮಾನಕ್ಕೆ ಒಳಗಾಗುತ್ತಾಳೆಂದು ಅಭಿಪ್ರಾಯಪಟ್ಟಿತು.