ಮಾಗಡಿ: ಗಡಿನಾಡಪ್ರಭು ಕೆಂಪೇಗೌಡರ ನಾಡು ಮಾಂಡವ್ಯ ಋಷಿ ಮುನಿಗಳ ತಪ್ಪೋ ಭೂಮಿ ಮಾಗಡಿ ರಂಗನಾಥಸ್ವಾಮಿಯ ಆಶೀರ್ವಾದ ನಮ್ಮ ತಂದೆ ತಾಯಿಯರ ಆಶೀರ್ವಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.ಸಿ.ಎಂ.ಡಿ.ಕೆ.ಶಿವಕುಮಾರ್ ಸಂಸದ ಡಿ.ಕೆ.ಸುರೇಶ್ ಅವರ ಕೃಪಾಕಟಾಕ್ಷ ಹಾಗೂ ವಿಶೇಷವಾಗಿ ಮಾಗಡಿ ಕ್ಷೇತ್ರದ ಪ್ರಭುದ್ದ ಮತದಾರರ ಆಶೀರ್ವಾದದಿಂದ ಇಂದು ನಾನು ಕೆ.ಆರ್.ಡಿ.ಸಿ.ಎಲ್ ನಿಗಮ ಮಂಡಳಿ ಅದ್ಯಕ್ಷನಾಗಿದ್ದೇನೆ ಎಂದು ಶಾಸಕರಾದ ಹೆಚ್.ಸಿ.ಬಾಲಕೃಷ್ಣ ಹೇಳಿದರು.
ರಾಜ್ಯ ರಸ್ತೆ ಸಾರಿಗೆ ನಿಗಮ ಮಂಡಳಿ ಸ್ಥಾನ ಲಭಿಸಿರುವ ಹಿನ್ನೆಲೆಯಲ್ಲಿ ರಾಜಾಜಿನಗರದ ಓರಿಯನ್ ಮಾಲ್ ಮುಂಭಾಗದಲ್ಲಿರುವ ಕೆ.ಆರ್.ಡಿ.ಸಿ.ಎಲ್.ಕಚೇರಿಯಲ್ಲಿ ತಮ್ಮ ಕುಟುಂಬಸ್ಥರು ಮುಖಂಡರು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ಅಧಿಕೃತವಾಗಿ ಅದ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅವರು ಮೂರು ದಶಕಗಳ ನಂತರ ನಮ್ಮ ಕುಟುಂಬಕ್ಕೆ ಸಚಿವ ಸಂಪುಟ ದರ್ಜೆ ಸ್ಥಾನಮಾನ ಸಿಕ್ಕಿದೆ.
ನಮ್ಮ ತಂದೆ ಚನ್ನಪ್ಪನವರು ರಾಮಕೃಷ್ಣ ಹೆಗಡೆ ಸಚಿವ ಸಂಪುಟದಲ್ಲಿ ಮುಜರಾಯಿ ಇಲಾಖೆಯ ಸಚಿವರಾಗಿದ್ದರು.ಇದೀಗ ನಾನು ಮಂತ್ರಿಯಾಗದಿದ್ದರೂ ನಿಗಮ ಮಂಡಳಿ ಅದ್ಯಕ್ಷ ಸ್ಥಾನ ಲಭಿಸಿದೆ.ಇದಕ್ಕೆ ಪಕ್ಷದ ವರಿಷ್ಠರಿಗೆ ಮುಖ್ಯಮಂತ್ರಿ ಉಪ ಮುಖ್ಯ ಮಂತ್ರಿಗಳಿಗೆ ಅಭಾರಿಯಾಗಿರುತ್ತೇನೆ.
ನಾನು ಮಂತ್ರಿಯಾಗಬೇಕು ಎಂಬುದು ನನ್ನ ಕ್ಷೇತ್ರದ ಜನತೆಯ ಅಭಿಲಾಷೆಯಾಗಿತ್ತು ಆದರೆ ಅದು ಲಭಿಸಲಿಲ್ಲ. ಇದರ ಬಗ್ಗೆ ನನಗೆ ಯಾವುದೇ ಅಸಮಾಧಾನವಿಲ್ಲ.ಸಿಕ್ಕಿರುವ ಸ್ಥಾನಮಾನಕ್ಕೆ ನ್ಯಾಯ ಒದಗಿಸಲು ಬದ್ದನಾಗಿರುತ್ತೇನೆ ಎಂದು ಬಾಲಕೃಷ್ಣ ತಿಳಿಸಿದರು.
ರಾಜ್ಯ ರಸ್ತೆ ಸಾರಿಗೆಯಲ್ಲಿ ಬರುವ ರಸ್ತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ.ಗುಣಮಟ್ಟದ ರಸ್ತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುವುದು.ಸರಕಾರದ ಬೊಕ್ಕಸಕ್ಕೆ ಹೊರೆಯಾಗದಂತೆ ನಿಗಾ ವಹಿಸಲಾಗುವುದು.
ನಮಗೆ ಬಜೆಟ್ ಒಳಪಡುವುದಿಲ್ಲ.ಲೋಕೋಪಯೋಗಿ ಸಚಿವ ಸತೀಶ್ ಜಾರಕೀಹೊಳಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಯಲ್ಲಿ ಚರ್ಚಿಸಿ ರಸ್ತೆ ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.ಜೊತೆಗೆ ನನ್ನ ತಾಲ್ಲೂಕಿನ ಕಡೆಗೆ ವಿಶೇಷ ಗಮನ ಹರಿಸಲಾಗುವುದು ಎಂದು ಬಾಲಕೃಷ್ಣ ಸ್ಪಷ್ಟಪಡಿಸಿದರು.
ಬಾಲಕೃಷ್ಣ ಅವರ ಕುಟುಂಬ ವರ್ಗದವರು,ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಂಗರಕ್ಷಕ ಕೊಟ್ರೇಶ್, ಚನ್ನಪಟ್ಟಣ ಭಾನುಗೌಡ, ಆಪ್ತ ಸಹಾಯಕರಾದ ಕುದೂರು ಲೋಕೇಶ್, ಬಿಡದಿ ರವಿ, ಕಟ್ಟೇಮನೆ ಕಿಶೋರ್, ಗೋಕುಲ್ ಮುನಿ ಸೇರಿದಂತೆ ಮತ್ತಿತರಿದ್ದರು.