This is the title of the web page
This is the title of the web page

ಕಂದಮ್ಮಗಳ ಪ್ರಾಣ ಕಸಿದ ಕೆಮ್ಮಿನ ಸಿರಪ್!

ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತಿರುವ 2ನೇ ಅತಿದೊಡ್ಡ ಉದ್ಯಮ ಔಷಧ ತಯಾರಿಕಾ ಘಟಕಗಳಾಗಿವೆ. ವಿಶ್ವ ಸಮುದಾಯಕ್ಕೆ ಅಗತ್ಯವಾಗಿ ಬೇಕಾದ ಜೀವನಾವಶ್ಯಕ ಔಷಧಗಳನ್ನು ಪೂರೈಸುವ ಮೂಲಕ ನಮ್ಮ ದೇಶ `ಔಷಧಾಲಯ’ವಾಗಿದೆ.
ಆದರೂ ತನ್ನ ಹೆಗ್ಗಳಿಕೆ ಮತ್ತು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಸವಾಲು ಭಾರತೀಯ ಔಷಧ ಉದ್ಯಮಗಳ ಮೇಲಿದೆ. ಹಾಗೆಯೇ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಔಷಧಗಳನ್ನು ಒದಗಿಸುವತ್ತಲೂ ಗಮನ ಕೊಡಬೇಕಿದೆ. ಹೀಗಾಗಿ ಔಷಧಗಳ ಸಂಶೋಧನೆಗಳಿಗೆ ಮತ್ತು ಸುಧಾರಣೆಗಳಿಗೆ ಹೆಚ್ಚು ಒತ್ತು ಕೊಡಲು ಸರ್ಕಾರ ಕೂಡ ಆದ್ಯತೆ ಕೊಡಬೇಕಿದೆ.

ಇದನ್ನೇಕೆ ಹೇಳುತ್ತಿರುವೆನೆಂದರೆ, ಗ್ಯಾಂಬಿಯಾ ಮತ್ತು ಉಜ್ಬೇಕಿಸ್ತಾನ್‍ನಲ್ಲಿ ಜರುಗಿರುವ ಸಾವುಗಳು ಭೀತಿಯನ್ನುಂಟು ಮಾಡಿವೆ. ನಮ್ಮ ದೇಶದ ಔಷಧ ತಯಾರಿಕೆ ವ್ಯವಸ್ಥೆ ಮತ್ತು ನಿಯಂತ್ರಣ ಪರಿಸರ ಕುರಿತಂತೆ ಮರು ಮೌಲ್ಯಮಾಪನಗೊಳಿಸಲು ಆಡಳಿತಗಾರರ ಕಣ್ತೆರೆಸಬೇಕೆಂಬ ತುಡಿತವೂ ಇದೆ.

2023ರ ಜನವರಿ ಮಾಸದಲ್ಲಿ ಮರಿಯನ್ ಬಯೋಟೆಕ್ ತಯಾರಿಸಿದ ಎರಹಡು ಕೆಮ್ಮಿನ ಔಷಧಗಳನ್ನು ಕುಡಿದು ಉಜ್ಬೇಕಿಸ್ತಾನದಲ್ಲಿ 18 ಮಕ್ಕಳು ಜೀವಬಿಟ್ಟಿವೆ. ಕೆಮ್ಮಿನ ಸಿರಪ್‍ಗಳು ಕಡಿಮೆ ಗುಣಮಟ್ಟದಿಂದ ಕೂಡಿದ್ದು, ಬಳಸುವ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಇಲ್ಲಿ ಬೆಳವಣಿಗೆಯ ವೇಗದಲ್ಲಿರುವ ಹಿಮಾಲಾಯ ಪ್ರದೇಶದ ಬಡ್ಡಿ-ಬರೋಟಿವಾಲಾ ಫಾರ್ಮಾಸ್ಯುಟಿಕಲ್ ಹಬ್ ಇದೀಗ ಸಂಶಯಾಸ್ಪದ ಕುಖ್ಯಾತಿಗೆ ಒಳಗಾಗಿರುವುದನ್ನು ಮರೆಯುವಂತಿಲ್ಲ. 2020ರಲ್ಲಿ ಕೆಮ್ಮಿನ ಒಂದು ಸಿರಪ್ ಕುಡಿದು 13 ಮಕ್ಕಳು ಜೀವ ಬಿಟ್ಟಿದ್ದರಿಂದ ಸ್ಥಳೀಯ ಔಷಧ ಉದ್ದಿಮೆಗಳು ತೀವ್ರವಾಗಿ ನಲುಗಿವೆ. ಜೀವ ಬಿಟ್ಟವರಲ್ಲಿ 12 ಮಕ್ಕಳು ಜಮ್ಮುವಿಗೆ ಸೇರಿದ್ದರೆ, 1 ಮಗು ಬಡ್ಡಿ-ಬರೋಟಿವಾಲಾಗೆ ಸೇರಿರುತ್ತದೆ.

ಬಡ್ಡಿ-ಬರೋಟಿವಾಲಾದ ಕಂಪನಿ ತಯಾರಿಸಿದ ಔಷಧ ಸೇವಿಸಿದ ನಂತರವಷ್ಟೇ ಮಕ್ಕಳಿಲ್ಲಿ ಜೀವ ಬಿಟ್ಟಿವೆ. `ನಕಲಿ’ ಮತ್ತು `ಕಳಪೆ ಗುಣಮಟ್ಟ’ದ ಔಷಧಗಳ ತಯಾರಿಕೆಯಾಗುತ್ತಿರುವ ಬಗ್ಗೆ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ. ನೊಯ್ಡಾ ಮೂಲದ ಮೇರಿಯನ್ ಬಯೋಟೆಕ್ ಕಂಪನಿ ತನ್ನ ಸುರಕ್ಷತೆ ಬಗ್ಗೆ ಖಾತರಿ ನೀಡಲು ವಿಫಲವಾಗಿರುವುದರಿಂದ ಉತ್ಪಾದನಾ ಪರವಾನಗಿಯನ್ನು ವಿಶ್ವ ಆರೋಗ್ಯ ಸಂಸ್ಥೆ ರದ್ದುಪಡಿಸಿದೆ. ಹರಿಯಾಣ ಮೂಲದ ಕಂಪನಿಯ ಕೆಮ್ಮಿನ ಔಷಧ ಸೇವಿಸಿ ಗ್ಯಾಂಬಿಯಾದಲ್ಲಿ 66 ಮಕ್ಕಳು ಜೀವ ಬಿಟ್ಟಿದ್ದವು. ಇದರ ಬಗ್ಗೆ 2022ರ ಅಕ್ಟೋಬರ್ 5ರಂದೇ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿತ್ತು.

ಔಷಧದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆಗೂ ಒಳಪಡಿಸಿತ್ತು. ಇದರಲ್ಲಿ ಅಧಿಕ ಪ್ರಮಾಣದ “ಎಥಿಲಿನ್ ಗ್ಲೈಕಾಲ್’’ ಮತ್ತು “ಹೈಥಿಲಿನ್ ಗ್ಲೈಕಾಲ್’’ ಇದೆ ಎಂಬ ವರದಿ ಬಂದಿತ್ತು. ಇವೆರೆಡು ಮನುಷ್ಯರ “ಮೂತ್ರಪಿಂಡ’’ವನ್ನು ಘಾಸಿಗೊಳಿಸಿ ಜೀವ ತೆಗೆಯುತ್ತದೆ ಎಂದು ಉಲ್ಲೇಖಿಸಿತ್ತು. ಇದರ ನಡುವೆ ಬಿಹಾರದ ಔಷಧ ತಯಾರಿಕಾ ಸಂಸ್ಥೆ ಮೆಸರ್ಸ್ ಹಿಂದುಸ್ಥಾನ್ ಮೆಡಿಕಲ್ ಪ್ರಾಡಕ್ಟ್ ಕಂಪನಿ ಮತ್ತು ಪಾಲುದಾರ ಪವನ್ ಕುಮಾರ್ ಎಲ್. ಎಂಬುವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನಿರಾಕರಿಸಿದೆ.

ಮಹಾರಾಷ್ಟ್ರದ ನಾಗಪುರದಲ್ಲಿ 41 ವರ್ಷದ ವ್ಯಕ್ತಿಯೊಬ್ಬ ಮದ್ಯಪಾನ ಮಾಡುವಾಗ ವಯಾಗ್ರಾ ಬ್ರಾಂಡ್‍ನೇಮ್‍ನಲ್ಲಿ ಮಾರಾಟ ಆಗುವ ಸಿಲ್ಡೆಫಿನಾಲ್ 50 ಎಂಜಿಯ ಎರಡು ಮಾತ್ರೆಗಳನ್ನು ಕುಡಿದು ಮೃತಪಟ್ಟಿದ್ದಾನೆ. ಹಾಗಾದರೆ ನಾವು ಕುಡಿಯುವ ಔಷಧಗಳು ಸುರಕ್ಷಿತವಲ್ಲವೇ? ಔಷಧ ನಿಯಂತ್ರಣ ಇಲಾಖೆ ದಕ್ಷವಾಗಿ ಕಾರ್ಯನಿರ್ವಹಿಸುತ್ತಿಲವೇ ಎಂಬ ಪ್ರಶ್ನೆ ನಿಮ್ಮಲ್ಲಿ ಎದ್ದಿರಬಹುದು. ಸಂಪೂರ್ಣವಾಗಿ ಹೌದು ಅಥವಾ ಇಲ್ಲವೆಂದು ಒಂದೇ ಗುಕ್ಕಿನಲ್ಲಿ ಹೇಳಲು ಕಷ್ಟವಾಗುತ್ತದೆ.

ಆದರೂ ನಮ್ಮಲ್ಲಿ ಸುರೇಶ್ ಕೆಂಪಯ್ಯ ಅವರಂತಹ ನುರಿತ ತಜ್ಞ ರಾಜ್ಯ ಔಷಧ ನಿಯಂತ್ರಣ ಇಲಾಖೆಯಲ್ಲಿದ್ದಾರೆ. ಇವರು ನಿಯಂತ್ರಕ ಆಡಳಿತದ ಮಧ್ಯೆಯೂ ಸಾಮಥ್ರ್ಯವೃದ್ಧಿ, ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಗಮನ ಕೇಂದ್ರೀಕರಿಸಿದ್ದಾರೆ. ಮುಖ್ಯವಾಗಿ ಆಧುನಿಕ ತಂತ್ರಜ್ಞಾನ ಸಾಧನಗಳೊಂದಿಗೆ ಉತ್ಪಾದನೆ ಮತ್ತು ಪೂರೈಕೆ ಸರಪಳಿ ನಿರ್ವಹಣೆಯನ್ನು ಗಟ್ಟಿಗೊಳಿಸುತ್ತಿದ್ದಾರೆ. ಅದರಲ್ಲೂ `ಔಷಧ ಮಾಲಿನ್ಯ’ದಿಂದ `ಹಸಿರು ಪರಿಸರ’ ಹಾಳಾಗದಂತೆ ನಿಗಾವಹಿಸಿದ್ದಾರೆ. ಇಂತಹ ಅಧಿಕಾರಿಗಳಿಂದಾಗಿಯೇ ಕಳಪೆ ಗುಣಮಟ್ಟದ ಔಷಧಗಳ ವಿರುದ್ಧದ ವಿಶೇಷ ಅಭಿಯಾನದ ಭಾಗವಾಗಿ ಕಾನೂನು ಜಾರಿ ಸಂಸ್ಥೆಗಳು 203 ಕಂಪನಿಗಳನ್ನು ಗುರುತಿಸಿವೆ. ಇದರಲ್ಲಿ 18 ಕಂಪನಿಗಳ ಪರವಾನಗಿಯನ್ನು ರದ್ದುಪಡಿಸಲಾಗಿದೆ. 76 ಕಂಪನಿಗಳಿಗೆ ಸೇರಿದ ಸ್ಥಳಗಳ ಮೇಲೆ ಜಂಟಿ ತಪಾಸಣೆಯನ್ನು ಮಾಡಲಾಗಿದೆ. 26 ಕಂಪನಿಗಳಿಗೆ ಷೋಕಾಸ್ ಕೂಡ ಜಾರಿ ಮಾಡಲಾಗಿದೆ.

ಇನ್ನೂ ಗ್ಯಾಂಬಿಯಾದಲ್ಲಿ 66 ಮಕ್ಕಳು ಜೀವ ಬಿಟ್ಟ ಪ್ರಕರಣದಿಂದ `ನಾಲ್ಕು’ ಭಾರತ ನಿರ್ಮಿತ ಕೆಮ್ಮಿನ ಸಿರಪ್‍ನ ಕಂಪನಿಗಳೊಂದಿಗೆ ವಿಶ್ವ ಆರೋಗ್ಯ ಸಂಸ್ಥೆ ಸಂಬಂಧ ಇಟ್ಟು ನೋಡಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತೀಯ ಔಷಧಿಗಳ ಉತ್ಪನ್ನದ ವಚ್ಚಸ್ಸಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ದೇಶದ ಮುಖ್ಯ ಔಷಧ ನಿಯಂತ್ರಕರು ಕಳವಳ ವ್ಯಕ್ತಪಡಿಸಿದ್ದರು.
ಇದಾದ ಬಳಿಕ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಹರಿಯಾಣ ರಾಜ್ಯದ ಔಷಧ ನಿಯಂತ್ರಣ ಇಲಾಖೆಯ ಸಹಯೋಗದೊಡನೆ ವಿಸ್ತøತವಾದ ತನಿಖೆಯನ್ನು ನಡೆಸಿತ್ತು.

ಹಾಗೆಯೇ ಗ್ಯಾಂಬಿಯಾದಲ್ಲಾದ ಮರಣಗಳ ಬಗ್ಗೆಯೂ ಪರಿಶೀಲನೆ ಮಾಡಿತ್ತು. ನಮ್ಮಲ್ಲಿ ಔಷಧಗಳ ಮಾಲಿನ್ಯ ಸಮಸ್ಯೆ ಹೊಸದಲ್ಲ. ಹಿಮಾಚಲ ಪ್ರದೇಶದಲ್ಲಿ ಮಕ್ಕಳು ಜೀವ ಬಿಟ್ಟಿದ್ದನ್ನು ಕಾಣಬಹುದು. ಇದಕ್ಕೆ ಹಿಂದೆ ಹೇಳಿದಂತೆ, ಎಥಿಲಿನ್ ಗ್ಲೈಕಾಲ್ ಮತ್ತು ಡೈಥಿಲಿನ್ ಗ್ಲೈಕಾಲ್ ಸೇವನೆಯೇ ಕಾರಣವಾಗಿದೆ. ಇದೇ ರೀತಿ ತಮಿಳುನಾಡು ಮೂಲದ ಗ್ಲೋಬಲ್ ಫಾರ್ಮಾ ಹೆಲ್ತ್‍ಕೇರ್ ಕಂಪನಿಯ ಕಣ್ಣಿನ ಡ್ರಾಪ್ಸ್‍ಗಳಿಂದ ಅಮೆರಿಕಾದಲ್ಲಿ ಕೆಲವರು ದೃಷ್ಟಿ ಕಳೆದುಕೊಂಡರೆಂಬ ಆರೋಪವೂ ಇದೆ.

ಇಷ್ಟಕ್ಕೆಲ್ಲವೂ ಕಾರಣ ಸೂಕ್ತ ತಪಾಣೆಯ ಕೊರತೆ ಮತ್ತು ಔಷಧದ ತಯಾರಕರು ಹಾಗೂ ಅಧಿಕಾರಿಗಳ ನಡುವಿನ `ಅಪವಿತ್ರ ಮೈತ್ರಿ’ ಆತಂಕಕಾರಿಯಾಗಿದೆ. ಕೆಲವು ವೈದ್ಯರು ಹಣದಾಸೆಗಾಗಿ ಔಷಧ ತಯಾರಕರ ಆಮಿಷಗಳಿಗೆ ಬಲಿಯಾಗುತ್ತಿದ್ದಾರೆ. ನಿರ್ವಹಣೆ ಮಾಡಬೇಕಾದ ಔಷಧ ನಿಯಂತ್ರಣ ಇಲಾಖೆ `ಸಿಬ್ಬಂದಿ’ ಕೊರತೆಯಿಂದಲೂ ನರಳುತ್ತಿದೆ. ಹೀಗಾಗಿಯೇ ಇಲ್ಲಿ ಕಾನೂನು ಸೊರಗಿದೆ. ಪರವಾನಗಿ ಕಳೆದುಕೊಂಡ ಕಂಪನಿ ತನ್ನ ಇತರೆ ಘಟಕಗಳನ್ನು `ವ್ಯವಹಾರ’ ಎಂಬಂತೆ ಎಗ್ಗಿಲ್ಲದೆ ನಡೆಸಿಕೊಂಡು ಹೋಗುತ್ತಿದೆ. ಇಂತಹ ಅಪರಾಧ ಎಸಗುವವರು ವ್ಯವಸ್ಥೆಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ಇವರಷ್ಟು ಔಷಧ ಪರಿವೀಕ್ಷಕರು ಪರಿಣಿತರಾಗಿರುವುದಿಲ್ಲ. ಇವರ ಲೋಪದೋಷಗಳನ್ನು ಪತ್ತೆಹಚ್ಚುವಷ್ಟು ಸಮರ್ಥರು ಆಗಿರುವುದಿಲ್ಲ.

ಇವತ್ತು ಐದು ವರ್ಷದೊಳಗಿನ ಮಕ್ಕಳಿಗೆ ನೀಡುವ ಯಾವುದೇ ಬಗೆಯ ಕೆಮ್ಮಿನ ಸಿರಪ್ ಸುರಕ್ಷಿತವಾಗಿದೆಯೇ ಅಥವಾ ಇಲ್ಲವೇ ಎಂಬುದು ಚರ್ಚೆಯಾಗಬೇಕಿದೆ. ಕೆಮ್ಮು, ಶೀತ, ನ್ಯುಮೋನಿಯಾ ಚಿಕಿತ್ಸೆಗಾಗಿ ಕೆಮ್ಮಿನ ಸಿರಪ್‍ಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸ್ಸು ಮಾಡುವುದಿಲ್ಲ. ಇದು ನ್ಯುಮೋನಿಯಾ ಅಂದರೆ `ಪುಪ್ಪಸ ಜ್ವರ’ವನ್ನು ಹಲವು ವಿಧಗಳಲ್ಲಿ ವರ್ಗೀಕರಿಸಿದೆ. ಅದರಲ್ಲಿ ಕೆಮ್ಮು, ಶೀತ ಇಲ್ಲದಿರುವ ನ್ಯುಮೋನಿಯಾ, ತೀವ್ರವಾದ ನ್ಯುಮೋನಿಯಾ ಮುಖ್ಯವಾಗಿವೆ. ಇವನ್ನು 0-5 ವರ್ಷದೊಳಗಿನ ಮಕ್ಕಳ ಉಸಿರಾಟದ ದರ, ಕೆಳ ಎದೆಭಾಗದಲ್ಲಿ ಒತ್ತುವಿಕೆಯೊಂದಿಗೆ ಸಾಮಾನ್ಯ ಅಪಾಯದ ಲಕ್ಷಣಗಳನ್ನು ಆಧರಿಸಿ ವರ್ಗೀಕರಿಸಲಾಗಿದೆ.

ಆರೋಗ್ಯ ತಜ್ಞರ ಪ್ರಕಾರ ತೀವ್ರ ಸ್ವರೂಪದ ನ್ಯುಮೋನಿಯಾಗೆ ಕೆಮ್ಮಿನ ಸೂತ್ರವನ್ನು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸ್ಸು ಮಾಡಿಲ್ಲ. ಆದರೆ ಲೆವೊ ಸಬ್ಲುಟಮಾಲ್ ಮಾತ್ರೆಯನ್ನು ನಾಲ್ಕು ಘಂಟೆಗೊಮ್ಮೆ ಪಡೆಯಲು ಹೇಳಿದೆ. ಮನೆ ಆಧಾರಿತ ಜೇನುತುಪ್ಪ, ತಾಯಿ ಹಾಲು, ಉಗುರು ಬೆಚ್ಚನೆಯ ನೀರು ಸೇವಿಸುವುದರಿಂದಲೂ ಕೆಮ್ಮು ಧಮ್ಮು ಶಮನಗೊಳ್ಳಲಿದೆ.

ನಮ್ಮ ದೇಶ ತನ್ನನ್ನು `ಜಗತ್ತಿನ ಔಷಧಾಲಯ’ವೆಂದು ಭಾವಿಸಿದೆ. ಜಗತ್ತಿನ ಮೂರನೇ ಅತಿದೊಡ್ಡ ಔಷಧ ಉತ್ಪಾದಕ ರಾಷ್ಟ್ರವೆಂಬ ಗರಿಮೆಯನ್ನು ಹೊಂದಿದೆ. ಸುಮಾರು 42 ಬಿಲಿಯನ್ ಡಾಲರ್‍ಗಳ ಔಷಧ ಉದ್ಯಮವನ್ನು ಹೊಂದಿದೆ. 2020-21ರಲ್ಲಿ 24.6 ಬಿಲಿಯನ್ ಡಾಲರ್ ಮೊತ್ತದ ಔಷಧಗಳನ್ನು ರಫ್ತು ಮಾಡಿದೆ. ಅಮೆರಿಕಾ, ಬ್ರಿಟನ್, ದಕ್ಷಿಣ ಆಫ್ರಿಕಾ, ರಷ್ಯಾ ಮತ್ತು ನೈಜಿರಿಯಾಗಳಲ್ಲಿ ದೊರಕುವ ಶೇಕಡ 40ರಷ್ಟು ಜೆನರಿಕ್ ಔಷಧಗಳು ನಮ್ಮಲ್ಲಿ ತಯಾರಾದ ಉತ್ಪನ್ನಗಳಾಗಿವೆ. ಹಾಗೆಯೇ ಬ್ರಿಟನ್‍ನಲ್ಲಿ ಮಾರಾಟವಾಗುವ ಕಾಲುಭಾಗ ಔಧಷಗಳು ನಮ್ಮ ದೇಶದಿಂದಲೇ ಹೋಗುತ್ತವೆ.

ಇದೇನೆ ಇರಲಿ, ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಫಾರ್ಮಾ ಒಂದರ ಮೇಲೆ ದಾಳಿ ನಡೆದಿತ್ತು. ಕಾರಣ ಆ ಸಂಸ್ಥೆ `ಆಹಾರ ಪದಾರ್ಥ’ಗಳ ತಯಾರಿಕೆಗೆ ಪರವಾನಗಿ ಪಡೆದಿತ್ತು. ಆದರೆ, ರಕ್ತದೊತ್ತಡ ನಿಯಂತ್ರಣಕ್ಕೆ ಮಾತ್ರೆಗಳನ್ನು ತಯಾರಿಸುತ್ತಿತ್ತು. ಇವರು ಕ್ಯೂ.ಆರ್. ಕೋಡ್‍ನ್ನು ಸಹ ನಕಲು ಮಾತ್ರೆಗಳ ಮೇಲೆ ಹಾಕುತ್ತಿದ್ದರು.

ಔಷಧ ತಯಾರಿಕೆ ಇಷ್ಟು ಸುಲಭವೇ ಎಂಬ ಯೋಚನೆ ನಿಮ್ಮನ್ನು ಕಾಡುತ್ತಿರಬಹುದು. ಖಂಡಿತವಾಗಿಯೂ ಇಲ್ಲ. ನಮ್ಮ ದೇಶದಲ್ಲಿ ಹೊಸ ಔಷಧಗಳಿಗೆ, ಕ್ಲಿನಿಕಲ್ ಪ್ರಯೋಗಗಳಿಗೆ ಅನುಮತಿಯನ್ನು ಕೇಂದ್ರೀಯ ಔಷಧಗಳ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‍ಓ) ನೀಡುತ್ತದೆ. ಜೊತೆಗೆ ಔಷಧಗಳ ನೋಂದಣಿ, ಗುಣಮಟ್ಟ ನಿಯಂತ್ರಣ ಹಾಗೂ ರಾಜ್ಯಗಳೊಂದಿಗೆ ಸಮನ್ವಯತೆಯನ್ನು, ಸಹವರ್ತಿ ಸೌಲಭ್ಯಗಳ ಪರಿಶೀಲನೆಯನ್ನು ನಡೆಸುತ್ತದೆ. ಹಾಗೆಯೇ ಔಷಧ ತಯಾರಕರಿಗೆ ಪರವಾನಗಿಗಳನ್ನು ಕೂಡ ನೀಡುತ್ತದೆ.

ಮುಖ್ಯವಾಗಿ ಔಷಧ ರಫ್ತಿಗೆ ಅನುಮತಿಯನ್ನು ನೀಡುತ್ತದೆ. 1940ರ ಸೌಂದರ್ಯವರ್ಧಕಗಳ ಕಾಯ್ದೆಯಡಿ ಗುಣಮಟ್ಟ ಕಾಪಾಡಿಕೊಳ್ಳದಿದ್ದಲ್ಲಿ ಶಿಕ್ಷೆಯನ್ನು ವಿಧಿಸುತ್ತದೆ. ಹಾಗೆಯೇ ಕೌನ್ಸಿಲ್ ಫರ್ ಹೆಲ್ತ್‍ಕೇರ್ ಮತ್ತು ಫಾರ್ಮಾ (ಸಿಎಚ್‍ಪಿ) ಸಂಸ್ಥೆಯು ಜಾಗತಿಕ ಚಿಂತನದ ಚಿಲುಮೆಯಾಗಿದ್ದು ಬ್ರೆಜಿಲ್, ಜಪಾನ್, ಅಮೆರಿಕಾದೊಂದಿಗೆ ತಮ್ಮ ದೇಶವನ್ನು ಒಳಗೊಂಡಿದೆ. ಇದು ಜಗತ್ತಿನಾದ್ಯಂತ ಇರುವ `ಆರೋಗ್ಯ ವ್ಯವಸ್ಥೆ’, `ಸಮಗ್ರ ಸುಸ್ಥಿರ ಬೆಳವಣಿಗೆ’ಗೆ ಪ್ರತಿಪಾದಿಸುತ್ತಾ ಸರ್ವರಿಗೂ ಗುಣಮಟ್ಟದ `ಆರೋಗ್ಯ ಪರಿಹಾರ’ ದೊರಕಿಸಿಕೊಡಲು ಶ್ರಮಿಸುತ್ತಿದೆ.

ಇಷ್ಟಕ್ಕೂ ಕೆಮ್ಮಿನ ಸೂತ್ರ ಎರಡರಿಂದ ಮೂರು ಔಷಧಗಳ ಮಿಶ್ರಣವಾಗಿದೆ. ಇವು ರೋಗಿಗಳಿಗೆ ಒಳಿತು ಮಾಡುವುದಕ್ಕಿಂತ ಕೆಡುಕನ್ನುಂಟು ಮಾಡುತ್ತವೆ. ಬಹುತೇಕ ವೈದ್ಯರಿಂದು ಮನೆಯಲ್ಲೊಂದು ನೆಬ್ಯುಲೈಸರ್ ಇಟ್ಟುಕೊಳ್ಳಲು ಸಲಹೆ ನೀಡುತ್ತಾರೆ. ಉಸಿರಾಟದ ಸಮಸ್ಯೆಯೊಂದಿಗೆ ಮೊಣಕಾಲು ಸೆಳೆತ ಕಂಡು ಬಂದಿದ್ದರೆ. ನೆಬ್ಯುಲೈಸೇಷನ್ ಮಾಡಿಸಿಕೊಳ್ಳಲು ಸಲಹೆ ನೀಡುತ್ತಾರೆ. ಹೀಗಾಗಿ, ಮಕ್ಕಳು, ಕೆಮ್ಮು-ಶೀತ ಪೀಡಿತರಾದರೆ ಮೊದಲಿಗೆ ಕೆಮ್ಮಿನ ಸಿರಪ್‍ಗಳನ್ನು ಬಳಸಲು ಶಿಫಾರಸ್ಸು ಮಾಡುವುದಿಲ್ಲ.

ಕೆಲವು ತಜ್ಞವೈದ್ಯರು ಇಂದಿಗೂ ಮಗುವಿನ ಕೆಮ್ಮು ಶಮನಗೊಳ್ಳಲು `ಮಾದರಿ ಕ್ರಮ’ಗಳನ್ನು ಸೂಚಿಸುವರು. ಅದರಲ್ಲಿ ಮಗುವನ್ನು ತೇವಗಾಳಿಯಿಂದ ಬೆಚ್ಚನೆ ಇಡಲು ಹೇಳುವರು. ಸ್ರವಿಸುವಿಕೆಯನ್ನು ತಡೆಗಟ್ಟಲು ದ್ರವಗಳನ್ನು ಉಪಯೋಗಿಸಲು ಸೂಚಿಸುವರು.
ಹಾಗಾದರೆ, ರಾಜ್ಯ ಔಷಧ ನಿಯಂತ್ರಣ ಇಲಾಖೆಯ ಪಾತ್ರವೇನು ಎಂಬ ಪ್ರಶ್ನೆ ನಿಮ್ಮಲ್ಲಿ ಎದ್ದಿರಬಹುದು. ವಿದೇಶಗಳಿಗೆ ಔಷಧ ರಫ್ತು ಮಾಡುವ ಮತ್ತು ಕಾರ್ಖಾನೆಗಳ ತಪಾಸಣೆ, ಗುಣಮಟ್ಟ ಪರಿಶೀಲಿಸುವ ಹೊಣೆಗಾರಿಕೆ ರಾಜ್ಯಮಟ್ಟದ ಔಷಧ ನಿಯಂತ್ರಣ ಇಲಾಖೆಯ ಹೆಗಲ ಮೇಲಿದೆ. ಆದರೆ, ಕಳಪೆ ತರಬೇತಿ, ಪುರಾತನ ಕಾಲದ ದಾಖಲೆ ನಿರ್ವಹಣಾ ವ್ಯವಸ್ಥೆ, ಸಿಬ್ಬಂದಿಗಳ ಕೊರತೆ ಕೂಡಿ ತನಿಖಾಧಿಕಾರಿಗಳ ಕಾರ್ಯನಿರ್ವಹಣೆಗೆ ಅಡ್ಡಲಾಗಿದೆ. ಇದಕ್ಕಿಂತಲೂ ಮುಖ್ಯವಾಗಿ ಮೇಲ್ವಿಚಾರಣೆ ಸಂಸ್ಥೆಗಳು ಆರ್ಥಿಕ ನೆರವಿನ ಕೊರತೆಯಿಂದಲೂ ಬಳಲುತ್ತಿವೆ.

ಇವುಗಳ ನಡುವೆಯೂ ಸುರೇಶ್ ಕೆಂಪಯ್ಯ ಅವರಂತಹವರ ಪರಿಶ್ರಮದಿಂದಾಗಿ ಸಕಾರಾತ್ಮಕ ಫಲಿತಾಂಶಗಳನ್ನು ಕಾಣಬಹುದೆಂಬ ಅಂದಾಜಿದೆ. ಅವರ ದೂರದೃಷ್ಟಿ, ವ್ಯಾಪಕವಾದ ಅನುಭವ ಮತ್ತು ಭವಿಷ್ಯ ಆಧಾರಿತ ಯೋಜನೆಗಳು ಬದಲಾವಣೆಗಳನ್ನು ತರುತ್ತವೆ.
ಓದುಗರೇ ಗೊತ್ತಿರಲಿ, ಕೆಲವೊಂದು ಕೆಮ್ಮಿನ ಸಿರಪ್‍ಗಳಲ್ಲಿ ಮಕ್ಕಳಿಗೆ ಅಪಾಯಕಾರಿಯಾಗುವ `ಕೊಡೈನ್’ ಇರುತ್ತದೆ. 12 ವರ್ಷದೊಳಗಿನ ಮಕ್ಕಳು ಕೊಡೈನ್ ಹೊಂದಿರುವ ಔಷಧ ಉತ್ಪನ್ನಗಳನ್ನು ಬಳಸಬಾರದೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಹಾಗೆಯೇ 12-18 ವರ್ಷದೊಳಗಿನ ಮಕ್ಕಳಲ್ಲಿ ಬಳಕೆ ಮಾಡುವಾಗ ಎಚ್ಚರಿಕೆಯಿಂದ ಬಳಸುವಂತಾಗಬೇಕು.

ಕಾರಣ, ಇದರ ಸೇವೆಯಿಂದ ಉಸಿರಾಟದ ತೊಂದರೆ, ಅರೆನಿದ್ರಾವಸ್ಥೆ ಸೇರಿದಂತೆ ಗೊಂದಲಕ್ಕೆ ಒಳಗಾಗುವ ಗಂಭೀರ ಅಡ್ಡ ಪರಿಣಾಮಗಳನ್ನು ಉಂಟುಮಾಡಲಿದೆ. ಇಷ್ಟೆಲ್ಲವೂ ಅರಿವಾದ ನಂತರ, ಔಷಧ ನಿಯಂತ್ರಣ ವ್ಯವಸ್ಥೆಯನ್ನು ಸುಧಾರಿಸಲು ಏನು ಮಾಡಬೇಕೆಂಬ ಪ್ರಶ್ನೆಯೂ ನಿಮ್ಮನ್ನು ಕಾಡುತ್ತಿರಬಹುದು. ಔಷಧಗಳು, ವೈದ್ಯಕೀಯ ಸಾಧನೆಗಳು ಮತ್ತು ಸೌಂದರ್ಯವರ್ದಕಗಳ ಮಸೂದೆ-2022ರ ಕರಡು ಪ್ರತಿಯನ್ನು 2022ರ ಜುಲೈ 8ರಂದು ಸಾರ್ವಜನಿಕ ಸಮಾಲೋಚನೆಗಾಗಿ ಬಿಡುಗಡೆ ಮಾಡಲಾಗಿತ್ತು. ಇದರಂತೆ ಔಷಧಗಳು, ವೈದ್ಯಕೀಯ ಸಾಧನಗಳು, ಸೌಂದರ್ಯವರ್ಧಕಗಳು, ಕ್ಲಿನಿಕಲ್ ಪ್ರಯೋಗಗಳು ಮತ್ತು ಆನ್‍ಲೈನ್ ಔಷಧಾಲಯಗಳು ನಿಯಂತ್ರಿಸಲು ನಿಬಂಧನೆಗಳೊಂದಿಗೆ ಸಮಗ್ರ ಮಸೂದೆ ರಚಿಸಲಾಗಿತ್ತು. ಇದು ನಮ್ಮ ದೇಶದ ಪ್ರಾಥಮಿಕ ಔಷಧ ನಿಯಂತ್ರಣವನ್ನು ಬದಲಿಸುವ ಉದ್ದೇಶವನ್ನು ಹೊಂದಿದೆ.

ನಮ್ಮ ಸರ್ಕಾರ ಔಷಧ ಉದ್ಯಮವನ್ನು ಬೆಂಬಲಿಸಲು ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ. ಔಷಧ ಇಲಾಖೆ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಯೋಜನೆಯ ಹೊರ ತಂದಿತ್ತು. ಔಷಧೀಯ ಉದ್ಯಮದ ಬಲವರ್ಧನೆಗೆ 500 ಕೋಟಿ ರೂಪಾಯಿಗಳ ವೆಚ್ಚದೊಂದಿಗೆಯೂ ಕೂಡಿತ್ತು. ಇದರಿಂದ ಔಷಧೀಯ ಕ್ಲಸ್ಟರ್‍ಗಳು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ(ಎಂಎಸ್‍ಎಂಇ)ಗಳ ಉತ್ಪಾದನೆ, ಗುಣಮಟ್ಟ ಮತ್ತು ಸುಸ್ಥಿರತೆಯನ್ನು ಸುಧಾರಿಸಲು ನೆರವು ನೀಡುತ್ತದೆ. ಔಷಧ ತಯಾರಿಕಾ ವಲಯದಲ್ಲಿ ಮೂಲಸೌಕರ್ಯ ಬಲಪಡಿಸುವುದು ಮತ್ತು ಔಷಧ ತಯಾರಿಕಾ ಉದ್ಯಮದಲ್ಲಿ ದೇಶವನ್ನು ಜಾಗತಿಕ ನಾಯಕನನ್ನಾಗಿಸುವುದು ಯೋಜನೆಯ ಉದ್ದೇಶವಾಗಿದೆ.

ಯೋಜನೆಯು ಔಷಧೀಯ ಕ್ಲಸ್ಟರ್‍ಗಳ ಸಾಮಥ್ರ್ಯವನ್ನು ಬಲಪಡಿಸುತ್ತದೆ. ಔಷಧೀಯ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸುತ್ತದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಿಯಂತ್ರಕ ಮಾನದಂಡಗಳನ್ನು ಪೂರೈಸಲು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಅನುಕೂಲವಾಗುವಂತೆ ತಂತ್ರಜ್ಞಾನ ಉನ್ನತೀಕರಣಕ್ಕೆ ಸಹಾಯ ಮಾಡುತ್ತದೆ. ಔಷಧೀಯ ಮತ್ತು ವೈದ್ಯಕೀಯ ಸಾಧನಗಳ ಪ್ರಚಾರ ಮತ್ತು ಅಭಿವೃದ್ಧಿ ಯೋಜನೆಯು ಅಧ್ಯಯನ ಸಮೀಕ್ಷೆ ವರದಿಗಳ ಕುರಿತು ಅರಿವು ಮೂಡಿಸುತ್ತದೆ. ಆಗ ಔಷಧೀಯ ಮತ್ತು ವೈದ್ಯಕೀಯ ಸಾಧನ ಕ್ಷೇತ್ರಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೂ ಅನುಕೂಲವಾಗುತ್ತದೆ.

ಇಲ್ಲಿ ಮಕ್ಕಳಿಗೆ ಕೆಮ್ಮು ಬಂದರೆ ಸಿರಪ್‍ಗಳನ್ನು ಬಳಸಬಾರದೇ ಎಂಬ `ದ್ವಂದ್ವ’ ಎದ್ದಿರಲೂಬಹುದು. ಕೆಲವೊಂದು ಅನಿವಾರ್ಯ ಸಂದರ್ಭದಲ್ಲಿ ವೈದ್ಯರ ಸಲಹೆ ಮೇರೆಗೆ ಕೆಮ್ಮು ಸಿರಪ್‍ಗಳನ್ನು ಎಚ್ಚರಿಕೆಯಿಂದ ಬಳಸಬಹುದಾಗಿದೆ. ಆದರೆ ಔಷಧ ತಯಾರಕರು ನೀಡಿರುವ ಪ್ರಮಾಣ ಮತ್ತು ಅಳತೆಯ ಸೂಚನೆಯನ್ನು ಕಡ್ಡಾಯವಾಗಿ ಅನುಸರಿಸಬೇಕಿದೆ.
ಮೊದಲಿಗೆ ಗುಣಮಟ್ಟದ ಔಷಧ ಸರಬರಾಜು ಮಾಡಿ ನಂಬಿಕಾರ್ಹತೆ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಇಲ್ಲದಿದ್ದಲ್ಲಿ ಔಷಧೀಯ ಉದ್ಯಮದ ಬಗೆಗಿನ ನಂಬಿಕೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಇದರೊಂದಿಗೆ ಭಾರತೀಯ ಔಷಧ ಮತ್ತು ಆರೋಗ್ಯ ಉದ್ಯಮಕ್ಕೆ ರಚನಾತ್ಮಕ ಮತ್ತು ದೀರ್ಘಾವಧಿಯ ಸುಧಾರಣೆಯೂ ಆಗಬೇಕಿದೆ.