ಲಂಡನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗೆ 14 ದಿನಗಳ ಕದನ ವಿರಾಮವನ್ನು ಘೋಷಿಸಿದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಭಾರೀ ಕುಸಿತವಾಗಿದೆ.
ಕದನ ವಿರಾಮದ ಸುದ್ದಿಯಿಂದಾಗಿ ಕಚ್ಚಾ ತೈಲದ ಬೆಲೆಗಳು ಒಂದೇ ದಿನದಲ್ಲಿ ಸುಮಾರು 13% ರಿಂದ 17% ರಷ್ಟು ಕುಸಿದಿವೆ. ಇದು ಕಳೆದ ಆರು ವರ್ಷಗಳಲ್ಲೇ ಒಂದೇ ದಿನ ಕಂಡ ಅತಿ ದೊಡ್ಡ ಕುಸಿತ ಇದಾಗಿದೆ.
ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲದ ಬೆಲೆ ಸುಮಾರು 16.13 ಡಾಲರ್ (14.3%) ಇಳಿಕೆಯಾಗಿ ಪ್ರತಿ ಬ್ಯಾರೆಲ್ಗೆ 96.82 ಡಾಲರ್(8,940 ರೂ.) ತಲುಪಿದೆ.
ಜಾಗತಿಕ ಮಾನದಂಡವಾದ ಒಪೆಕ್ ದೇಶಗಳ ಬ್ರೆಂಟ್ ಕಚ್ಚಾ ತೈಲದ ದರ 14.84 ಡಾಲರ್ (13.6%) ನಷ್ಟು ಕುಸಿದು ಪ್ರತಿ ಬ್ಯಾರೆಲ್ಗೆ 94.43 ಡಾಲರ್ಗೆ(8,720 ರೂ.) ಇಳಿಕೆಯಾಗಿದೆ
ಈ ಘೋಷಣೆಗೂ ಮುನ್ನ ಯುದ್ಧದ ಭೀತಿಯಿಂದಾಗಿ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ 117 120 ಡಾಲರ್ವರೆಗೂ (11 ಸಾವಿರ ರೂ.ವರೆಗೆ) ಏರಿಕೆಯಾಗಿತ್ತು.
ಇರಾನ್ ಹಾರ್ಮುಜ್ ಜಲಸಂಧಿ ಯನ್ನು ತಕ್ಷಣವೇ ಮುಕ್ತಗೊಳಿಸಲು ಇರಾನ್ ಒಪ್ಪಿಗೆ ನೀಡಿದ್ದರಿಂದ ಮಾರುಕಟ್ಟೆಯಲ್ಲಿನ ಆತಂಕವನ್ನು ಕಡಿಮೆ ಮಾಡಿದೆ. ಜಗತ್ತಿನ ಸುಮಾರು 20% ತೈಲ ಪೂರೈಕೆ ಈ ಮಾರ್ಗದ ಮೂಲಕವೇ ನಡೆಯುವುದರಿಂದ ಪೂರೈಕೆ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಲೆ ಇಳಿದಿದೆ.



