ವಿಶಾಖಪಟ್ಟಣಂ: ಅಂತೂ ಇಂತೂ ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ಖಾತೆ ತೆರೆದಿದೆ. ಚೆನ್ನೈ ಸೂಪರ್ ಕಿಂಗ್ಸ್ ಗೆ 20 ರನ್ ಗಳ ಸೋಲುಣಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು.
ಡೆಲ್ಲಿ ಪರ ಆರಂಭಿಕರಿಬ್ಬರೂ ಅಬ್ಬರದ ಆಟವಾಡಿದರು. ಪೃಥ್ವಿ ಶಾ 43, ಡೇವಿಡ್ ವಾರ್ನರ್ 52 ರನ್ ಸಿಡಿಸಿದರು. ಬಳಿಕ ಬಂದ ನಾಯಕ ರಿಷಬ್ ಪಂತ್ 51 ರನ್ ಗಳಿಸಿ ಮಿಂಚಿದರು. ಹಲವು ದಿನಗಳ ನಂತರ ಅಭಿಮಾನಿಗಳಿಗೆ ರಿಷಬ್ ಬ್ಯಾಟಿಂಗ್ ಝಲಕ್ ನೋಡಲು ಸಿಕ್ಕಿತು.ಈ ಮೊತ್ತ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಲಷ್ಟೇ ಶಕ್ತವಾಯಿತು.
ಆರಂಭಿಕ ರಚಿನ್ ರವೀಂದ್ರ 2, ನಾಯಕ ಋತುರಾಜ್ ಗಾಯಕ್ ವಾಡ್ 1 ರನ್ ಗಳಿಸಿ ಔಟಾದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯಾ ರೆಹಾನೆ 45, ಡೇರಿಲ್ ಮಿಚೆಲ್ 34 ರನ್ ಗಳಿಸಿ ಚೇತರಿಕೆ ನೀಡಿದರು.ಆದರೆ ನಿನ್ನೆಯ ಪಂದ್ಯದ ಹೈಲೈಟ್ ಧೋನಿ ಅಬ್ಬರದ ಬ್ಯಾಟಿಂಗ್. ಈ ಐಪಿಎಲ್ ನಲ್ಲಿ ಇದೇ ಮೊದಲ ಬಾರಿಗೆ ಧೋನಿ ಬ್ಯಾಟಿಂಗ್ ಗೆ ಬಂದಿದ್ದರು.
ಕೇವಲ 16 ಎಸೆತಗಳಲ್ಲಿ 3 ಸಿಕ್ಸರ್ ಸಹಿತ ಅಜೇಯ 37 ರನ್ ಸಿಡಿಸಿ ಧೋನಿ ಪ್ರೇಕ್ಷಕರನ್ನು ರಂಜಿಸಿದರು. ಅವರಿಗೆ ಸಾಥ್ ನೀಡಿದ ರವೀಂದ್ರ ಜಡೇಜಾ 21 ರನ್ ಗಳಿಸಿದರು. ಆದರೆ ಇವರಿಬ್ಬರಿಗೂ ತಂಡಕ್ಕೆ ಗೆಲುವು ಕೊಡಿಸಲಾಗಲಿಲ್ಲ. ಡೆಲ್ಲಿ ಪರ ಮುಕೇಶ್ ಕುಮಾರ್ 3, ಖಲೀಲ್ ಅಹಮ್ಮದ್ 2 ವಿಕೆಟ್ ಕಬಳಿಸಿದರು.