ನಾರ್ತ್ ಸೌಂಡ್(ಆಯಂಟಿಗುವಾ) ಇಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ಕ್ರಿಕೆಟ್ನ ಗುಂಪು ಸೂಪರ್ ಎಂಟರ ಗುಂಪು ಒಂದರ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ.
31 ವರ್ಷದ ಕಮಿನ್ಸ್ 18ನೇ ಓವರ್ನ ಕೊನೆಯ ಎರಡು ಎಸೆತಗಳಲ್ಲಿ ಮೆಹಮದುಲ್ಲಾ ಮತ್ತು ಮಹೆದಿ ಹಸನ್ ಅವರನ್ನು ಔಟ್ ಮಾಡಿದರು.
ಕೊನೆಯ ಓವರ್ನ ಮೊದಲ ಎಸೆತದಲ್ಲಿ ಟೊವಿಡ್ ಹೃದೊಯ್ ಅವರ ವಿಕೆಟ್ ಗಳಿಸುವ ಮೂಲಕ ಟಿ-20 ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ 7ನೇ ಆಟಗಾರ ಎನಿಸಿದರು.
ಈ ಆವೃತ್ತಿಯ ಮೊದಲ ಹ್ಯಾಟ್ರಿಕ್ ಸಾಧನೆ ಇದಾಗಿದೆ. 4 ಓವರ್ಗಳಲ್ಲಿ ಪ್ಯಾಟ್ 39 ರನ್ ನೀಡಿ 3 ವಿಕೆಟ್ ಕಬಳಿಸಿದರು.ಈ ಮೂಲಕ ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ 2ನೇ ಆಸೀಸ್ ಬೌಲರ್ ಎಂಬ ಖ್ಯಾತಿಗೆ ಪ್ಯಾಟ್ ಪಾತ್ರರಾದರು. ಮತ್ತೊಬ್ಬ ಆಸ್ಟ್ರೇಲಿಯಾ ಬೌಲರ್ ಬ್ರೆಟ್ ಲೀ ಸಹ ಬಾಂಗ್ಲಾದೇಶದ ವಿರುದ್ಧವೇ ಹ್ಯಾಟ್ರಿಕ್ ಸಾಧನೆ ಮಾಡಿರುವುದು ವಿಶೇಷ..
2007ರಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ನಲ್ಲಿ ಬ್ರೆಟ್ ಲಿ ಮೊದಲಿಗರಾಗಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. 2021ರವರೆಗೆ ಈ ಸಾಧನೆ ಮಾಡಿದ ಏಕೈಕ ಬೌಲರ್ ಎಂಬ ದಾಖಲೆ ಅವರ ಹೆಸರಿನಲ್ಲಿತ್ತು. 2021ರಲ್ಲಿ ಐರ್ಲೆಂಡ್ ವೇಗಿ ಕರ್ಟಿಸ್ ಕ್ಯಾಂಪರ್, ಶ್ರೀಲಂಕಾ ಸ್ಪಿನ್ನರ್ ವನಿಂದು ಹಸರಂಗಾ, ದಕ್ಷಿಣ ಆಫ್ರಿಕಾ ವೇಗಿ ಕಗಿಸೊ ರಬಾಡ ಈ ಸಾಧನೆ ಮಾಡಿದ್ದರು.2022ರಲ್ಲಿ ಯುಎಇ ತಂಡದ ಕಾರ್ತಿಕ್ ಮೇಯಪ್ಪನ್, ಐರ್ಲೆಂಡ್ನ ಜೊಶು ಲಿಟ್ಟಲ್ ಹ್ಯಾಟ್ರಿಕ್ ವಿಕೆಟ್ ದಾಖಲೆ ಬರೆದಿದ್ದರು.