ಕೆ.ಆರ್.ಪುರ: ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ಮಕ್ಕಳು ಭಾಗವಹಿಸುವುದರಿಂದ ಶಿಸ್ತು, ಸಂಯಮ, ದೇಶಭಕ್ತಿ ವೃದ್ಧಿಯಾಗಲಿದೆ ಎಂದು ದಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ ನ ಕಾರ್ಯದರ್ಶಿ ರವಿಕುಮಾರ್ ಹೇಳಿದರು.
ಕೆ.ಆರ್.ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ದಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ ನ 73 ನೇ ಸಂಸ್ಥಾಪನಾ ದಿನ ಹಾಗೂ ಧ್ವಜ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸೈಕಲ್ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಸುಮಾರು ವರ್ಷಗಳ ಇತಿಹಾಸವಿದ್ದು, ಈ ಸಂಸ್ಥೆಯು ವಿಶ್ವದಾದ್ಯಂತ ಶಾಖೆಗಳನ್ನು ಹೊಂದಿದೆ.
ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಸಮಾಜಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇತ್ತೀಚೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ವಿಶೇಷವಾಗಿ ಮಕ್ಕಳಿಗೆ ಶಿಸ್ತು, ಸಂಯಮ, ದೇಶಭಕ್ತಿ, ಉದಾರ ಮನೋಭಾವ ಗಳನ್ನು ಬೆಳೆಸುವಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಪ್ರಸಿದ್ದಿ ಪಡೆದಿರುವುದರಿಂದ ಮಕ್ಕಳು ಹೆಚ್ಚು ಭಾಗವಹಿಸು ವಂತಾಗಬೇಕು. ಪ್ರತಿ ಶಾಲಾ ಕಾಲೇಜು ಮಟ್ಟ ದಲ್ಲಿಯೇ ಸ್ಕೌಟ್ಸ್ ಮತ್ತು ಗೈಡ್ಸ್ ಸಕ್ರಿಯವಾಗಿ ಭಾಗವಹಿಸುವಲ್ಲಿ ಗಮನಹರಿಸುವುದು ಉತ್ತಮ. ಮಕ್ಕಳು ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನರಾಗುವಂತೆ ಸಲಹೆ ನೀಡಿದರು.
ಸಮಾಜ ಸೇವಕ, ಮುಖಂಡ ಮಂಜುರಾಜ್ ಮಾತನಾಡಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ದೇಶದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ದೇಶದ ಭವಿಷ್ಯ ನಿರ್ಮಿಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಸಹಕಾರಿಯಾಗಿದೆ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ನ ಸಂಸ್ಥಾಪನಾ ದಿನಾಚರಣೆ ಹಾಗೂ ಧ್ವಜ ದಿನದ ಅಂಗವಾಗಿ ಕೆ.ಆರ್.ಪುರದ ಪ್ರಥಮ ದರ್ಜೆ ಕಾಲೇಜು ಆವರಣದಿಂದ ಐಟಿಐ ಸೇತುವೆವರೆಗೂ ಸೈಕಲ್ ಜಾಥ ಹಮ್ಮಿಕೊಳ್ಳಲಾಗಿತ್ತು. ನೂರೈವತ್ತಕ್ಕೂ ಹೆಚ್ಚು ಮಕ್ಕಳು ಸೈಕಲ್ ಜಾಥದಲ್ಲಿ ಪಾಲ್ಗೊಂಡಿದ್ದರು.
ದಿ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಉಪ ಆಯುಕ್ತರಾದ ಡಾ.ಮನಸಾ ಹೆಬ್ಬಾರ್, ಬಿಇಒ ರಾಮಮೂರ್ತಿ, ಕೆ.ಆರ್.ಪುರ ಕಾಲೇಜು ಪ್ರಾಂಶುಪಾಲರಾದ ಪ್ರತಿಭಾ ಪಾರ್ಶ್ವನಾಥ, ಧೀರಜ್,ರಾಜೇಶ್ವರಿ, ಉದಯ್, ಪವನ್ ಕುಮಾರ್, ವೇಣುಗೋಪಾಲ್, ಹಂಸರಾಜ್ ಇದ್ದರು.