10ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಪುಣೇರಿ ಪಲ್ಟನ್, ಸೋಮವಾರ ನಡೆದ ಪಂದ್ಯದಲ್ಲಿ 30-23 ರಿಂದ ದಬಾಂಗ್ ದೆಹಲಿ ತಂಡವನ್ನು ಮಣಿಸಿತು.ಆರಂಭದಿಂದಲೂ ಪಂದ್ಯದಲ ಮೇಲೆ ಹಿಡಿತವನ್ನು ಸಾಧಿಸಿದ್ದ ಪುಣೇರಿ ಅಂಕಗಳ ಬೇಟೆಯಲ್ಲು ಮುನ್ನಡೆ ಕಾಯ್ದುಕೊಂಡಿತು.
ಪರಿಣಾಮ ಪೂರ್ಣ ಅಂಕವನ್ನು ಕಲೆ ಹಾಕಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆಯಿತು. ಆಡಿರುವ 5 ಪಂದ್ಯಗಳಲ್ಲಿ 4 ಜಯ, 1 ಸೋಲು ಕಂಡಿರುವ ಪುಣೇರಿ ಒಟ್ಟು 21 ಅಂಕ ಕಲೆ ಹಾಕಿದೆ. ದಬಾಂಗ್ ದೆಹಲಿ ತಂಡ ಟೂರ್ನಿಯಲ್ಲಿ ಮೂರನೇ ಸೋಲಿಗೆ ಶರಣಾಯಿತು.
ಪುಣೇರಿ ಮೊದಲಾವಧಿಯ 20 ನಿಮಿಷದಲ್ಲಿ ಅಬ್ಬರದ ಆಟವನ್ನು ಆಡಿತು. ಈ ಅವಧಿಯಲ್ಲಿ ಪುಣೇರಿ 18-12 ಅಂಕಗಳ ಮುನ್ನಡೆ ಸಾಧಿಸಿತು. ಹೆಚ್ಚಿನ ಅಂಕಗಳನ್ನು ದಾಳಿಯಲ್ಲಿ ಗಳಿಸಿ ಪುಣೇರಿ ಆರ್ಭಟಿಸಿತು.
ದಬಾಂಗ್ ದೆಹಲಿ ದಾಳಿಯಲ್ಲಿ ಸ್ಥಿರ ಪ್ರದರ್ಶನ ನೀಡಿದರು, ರಕ್ಷಣಾ ವಿಭಾಗದ ಆಟ ಕೈ ಕೊಟ್ಟಿತು. ಪರಿಣಾಮ ಈ ಅವಧಿಯಲ್ಲಿ ಒಮ್ಮೆ ದೆಹಲಿ ತಂಡ ಅಂಗಳವನ್ನು ಖಾಲಿ ಮಾಡಿತು.ಎರಡನೇ ಅವಧಿಯ ಆಟದಲ್ಲಿ ಪುಟಿದೇಳುವ ಸೂಚನೆಯನ್ನು ದೆಹಲಿ ತಂಡ ನೀಡಿತು. ಆದರೆ ಮೊದಲಾವಧಿಯಲ್ಲಿ ಪುಣೇರಿ ಪಲ್ಟನ್ ಪಡೆದಿದ್ದ ಅಂಕ ಪಂದ್ಯದಲ್ಲಿ ವ್ಯತ್ಯಾಸ ಮೂಡಿಸಿತು. ಕೊನೆಯ 20 ನಿಮಿಷದ ಆಟದಲ್ಲಿ ದೆಹಲಿ ದಾಳಿಯಲ್ಲಿ 6, ಟ್ಯಾಕಲ್ನಲ್ಲಿ 3 ಅಂಕ ಪೇರಿಸಿತು. ಪುಣೇರಿ ಈ ಅವಧಿಯಲ್ಲಿ ದಾಳಿಯಲ್ಲಿ 5, ಟ್ಯಾಕಲ್ನಲ್ಲಿ 7 ಅಂಕ ಬಾಚಿಕೊಂಡಿತು.
ಪುಣೇರಿ ತಂಡದ ಪರ ನಾಯಕ ಅಸ್ಲಂ ಮುಸ್ತಫ್ 8, ಮೋಹಿತ್ 7 ಅಂಕಗಳನ್ನು ಕಲೆ ಹಾಕಿದರು. ರಕ್ಷಣಾ ವಿಭಾಗದಲ್ಲಿ ಆಟಗಾರರು ಸ್ಥಿರ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಿಂಚಿದರು.