ಹೊಸಕೋಟೆ: ಕೃಷಿಗೆ ಪರ್ಯಾಯವಾಗಿರೈತರು ಕೈಗೊಳ್ಳುತ್ತಿರುವ ಹೈನುಗಾರಿಕೆಯು ಆರ್ಥಿಕಾಭಿ ವೃದ್ಧಿಗೆ ಸಹಕಾರಿಯಾಗಿದೆ ಎಂದು ಟಿಎಪಿಸಿಎಂ ಎಸ್ನ ಮಾಜಿ ಅಧ್ಯಕ್ಷ ಟಿ.ಸೊಣ್ಣಪ್ಪ ಹೇಳಿದರು.ಅವರು ತಾಲೂಕಿನ ಜಡಿಗೇನಹಳ್ಳಿ ಹೋಬಳಿ ಮಾಕನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಅಮೃತ ಭವನ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿ ಲೋಕಸಭಾ ಸದಸ್ಯ ಬಿ.ಎನ್.ಬಚ್ಚೇಗೌಡರ ಪರಿಶ್ರಮದಿಂದಾಗಿ ಸುಮಾರು 20 ವರ್ಷಗಳ ಹಿಂದೆ ಸ್ಥಾಪನೆಗೊಂಡ ಶೀಥಲ ಕೇಂದ್ರ ಹಾಗೂ ತದನಂತರ ಡೇರಿಯಾಗಿ ಪರಿವರ್ತನೆಗೊಂಡಿದ್ದು, ಸ್ಥಳೀಯ ಹಾಲು ಉತ್ಪಾದಕರಿಗೆ ವರದಾನವಾಗಿದೆ. ಇದಕ್ಕೂ ಮೊದಲು ಸಂಗ್ರಹಗೊಂಡ ಹಾಲು ಬೆಂಗಳೂರಿಗೆ ಸಾಗಣೆಯಾಗುತ್ತಿದ್ದು, ಹಲವಾರು ಕಾರಣಗಳಿಂದಾಗಿ ಹಾಳಾಗಿ ರೈತರಿಗೆ ನಷ್ಟವಾಗುತ್ತಿದುದು ಸಹ ನಿವಾರಣೆಯಾಗಿದೆ. ಇದರೊಂದಿಗೆ ಸ್ಥಳೀಯರಿಗೆ ಉದ್ಯೋಗವಕಾಶಗಳು ಸಹ ಲಭ್ಯವಾಗುತ್ತಿದೆ.
ರೈತರು ಹೈನುಗಾರಿಕೆಯಲ್ಲಿ ಪರಿಸ್ಥಿತಿಗೆ ಅನು ಗುಣವಾಗಿ ರಾಸುಗಳ ಪಾಲನೆ, ಪೋಷಣೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಹಾಲು ಉತ್ಪಾದನೆಯೊಂದಿಗೆ ಗುಣಮಟ್ಟವನ್ನು ಸಹ ಕಾಯ್ದುಕೊಳ್ಳಲು ಗಮನಹರಿಸಬೇಕು. ಈ ದಿಶೆಯಲ್ಲಿ ಸಂಘದ ಸಿಬ್ಬಂದಿ, ಆಡಳಿತ ಮಂಡಳಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ.
ಒಕ್ಕೂಟ ಸಹ ಉತ್ಫಾದಕರಿಗೆ ಪ್ರೋತ್ಸಾಹದಾಯಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಸಮರ್ಪಕವಾಗಿ ಪಡೆಯಲು ಮಾರ್ಗದರ್ಶನ ನೀಡಬೇಕಾದ್ದು ಅತ್ಯವಶ್ಯವಾಗಿದೆ ಎಂದರು.ಸಂಘದ ಅಧ್ಯಕ್ಷ ಎಂ.ಪಿ.ರಾಜಣ್ಣ ಮಾತನಾಡಿ ಸಂಘವು 1978-79ನೇ ಸಾಲಿನಲ್ಲಿ ಪ್ರಾರಂಭಗೊಂಡಿದ್ದು ಪ್ರಸ್ತುತ 200 ಸದಸ್ಯರಿಂದ ಪ್ರತಿದಿನ 800 ಲೀ.ಗಳಷ್ಟು ಗುಣಮಟ್ಟದ ಹಾಲನ್ನು ಶೇಖರಿಸುತ್ತಿದೆ.
ಸಂಘದ ಮೊದಲನೇ ಮಹಡಿಯನ್ನು ರೂ.15.80 ಲಕ್ಷ ರೂ.ಗಳಲ್ಲಿ ನಿರ್ಮಿಸಿದ್ದು ಬೆಂಗಳೂರು ಹಾಲು ಒಕ್ಕೂಟದಿಂದ 2 ಲಕ್ಷ ರೂ.ಗಳ ಸಹಾಯಧನ ಪಡೆಯಲಾಗಿದೆ. ಉಳಿದ ಹಣವನ್ನು ಸಂಘದ ಸ್ವಂತ ನಿಧಿಯಿಂದ ಬಳಸಲಾಗಿದೆ. ಉತ್ಪಾದಕರಿಗೆ ಒಕ್ಕೂಟ ನೀಡುವ ರಾಸುಗಳ, ರೈತರ ವೈಯಕ್ತಿಕ ವಿಮೆ, ರಿಯಾಯಿತಿ ದರದಲ್ಲಿ ಲವಣಮಿಶ್ರಿತ ಪೌಷ್ಠಿಕ ಆಹಾರ, ಮೇವು ಕತ್ತರಿಸುವ, ಹಾಲು ಕರೆಯುವ ಯಂತ್ರ, ಮ್ಯಾಟ್ಗಳನ್ನು ಸಹ ಒದಗಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಯೂನಿಯನ್ನ ನಿರ್ದೇಶಕ ಎಸ್.ರಮೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರಾಮಚಂದ್ರಪ್ಪ, ಗಾಯತ್ತಿ ಮುನಿರಾಜು, ಸದಸ್ಯ ಮಧುಕುಮಾರ್, ಸಂಘದ ಉಪಾಧ್ಯಕ್ಷ ವೆಂಕಟೇಶಪ್ಪ, ನಿರ್ದೇಶಕರಾದ ರಾಜಶೇಖರ್, ಅಪ್ಪಾಜಿಗೌಡ, ಹನುಮಂತರಾಯಪ್ಪ, ರಾಜಣ್ಣ, ನಾರಾಯಣಸ್ವಾಮಿ, ಚನ್ನರಾಯಪ್ಪ, ಮುನಿಯಪ್ಪ, ಭಾರತಿ, ಭಾಗ್ಯಮ್ಮ, ಮುಖ್ಯ ಕಾರ್ಯನಿರ್ವಾಹಕ ಎಂ.ಕೆ.ರಮೇಶ್ ಇನ್ನಿತರರು ಭಾಗವಹಿಸಿದ್ದರು.