ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರವಾಗಿ ಸುರಿದ ಮಳೆ ನಗರದ ಹಲವು ಕಡೆ ಅವಾಂತರ ಸೃಷ್ಟಿಸಿದೆ. ಲಾಲ್ ಬಾಗ್ ರಸ್ತೆ, ಕಾರ್ಪೊರೇಷನ್, ಟೌನ್ ಹಾಲ್, ಜಯನಗರ, ಶಾಂತಿನಗರ, ಡಬ್ಬಲ್ ರೋಡ್ ಸೇರಿ ಸುತ್ತಮುತ್ತ ಸುರಿದ ಮಳೆಯಿಂದ ಮರಗಳು, ಕರೆಂಟ್ ಕಂಬಗಳು ಧರೆಗುರುಳಿವೆ. ಲಾಲ್ ಬಾಗ್ ರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿ ದೊಡ್ಡ ಮರ ಬಿದ್ದಿದೆ. ಮರ ಬಿದ್ದಿರುವ ರಭಸಕ್ಕೆ ಪಕ್ಕದಲ್ಲಿದ್ದ ಕರೆಂಟ್ ಕಂಬ ಕೂಡ ಬಿದ್ದಿದೆ.
ಪುಟ್ಪಾತ್ ಮೇಲೆ ಕರೆಂಟ್ ಕಂಬ ಬಿದ್ದಿದ್ದರೂ ಬೆಸ್ಕಾಂ ಅವರು ಕಂಬದಲ್ಲಿರುವ ಕರೆಂಟ್ ತೆಗೆದಿಲ್ಲ. ಕಂಬ ಮರದ ಮರೆಯಲ್ಲಿ ಬಿದ್ದಿರುವ ಕಾರಣ ಪುಟ್ಪಾತ್ ಮೇಲೆ ಜನರು ನಡೆದುಕೊಂಡು ಹೋದರೆ ರಾತ್ರಿ ಸಮಯದಲ್ಲಿ ಅನಾಹುತ ಕಟ್ಟಿಟ್ಟಬುತ್ತಿ. ಮರ ಧರೆಗೆ ಉರುಳಿ ವಾಹನ ಸವಾರರಿಗೆ ಸಮಸ್ಯೆ ಉಂಟಾಯಿತು. ಮಳೆಯಿಂದ ಜನರು ಸಂಕಷ್ಟ ಅನುಭವಿಸಿದರು. ರಾತ್ರಿ ಸುಮಾರು ೯ ಗಂಟೆಗೆ ಶುರುವಾದ ಮಳೆ ಎಡಬಿಡದೇ ಸುರಿಯಿತು.