ಮೈಸೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಡಿ ಜಾತಿ ನಿಂದನೆ ಪ್ರಕರಣ ಗಳನ್ನು ಸರಿಯಾಗಿ ತನಿಖೆ ಮಾಡದೇ ನಿರ್ಲಕ್ಷ್ಯ ವಹಿಸಿದರೆ ಆಯಾ ಜಿಲ್ಲೆಯ ಎಸ್ಪಿ ಹಾಗೂ ಜಿಲ್ಲಾಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾ ಗುವುದು ಎಂದು ಸಮಾಜ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಇಂದಿಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದ ಆಡಳಿತ ಕಚೇರಿ ಸಭಾಂಗಣದಲ್ಲಿ ಮೈಸೂರು ವಿಭಾಗದ ಸಮಾಜ ಕಲ್ಯಾಣ ಇಲಾಖೆ ಹಾಗೂ ಅದರಡಿ ಬರುವ ನಿಗಮ ಮಂಡಳಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ವಿಡಿಯೋ ಕಾನ್ಸರೆನ್ಸ್ ಮೂಲಕ ವಿವಿಧ 8 ಜಿಲ್ಲೆಗಳ ಡಿಸಿ, ಎಸ್ಪಿಗಳೊಂದಿಗೆ ಎಸ್ಸಿ, ಎಸ್ಟಿ ದೌರ್ಜನ್ಯ ಪ್ರಕರಣಗಳ ತನಿಖಾ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು.
ಕಾಯ್ದೆಯಡಿ ಜಾತಿ ನಿಂದನೆ ದೂರು ನೀಡಿದ ತಕ್ಷಣ ಎಫ್ಐಆರ್ ಮಾಡಿ ತನಿಖೆ ನಡೆಸಿದ ಬಳಿಕ ನಿಗದಿತ ಅವಧಿಯೊಳಗಾಗಿ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಬೇಕು. ಅಗತ್ಯ ಸಾಕ್ಷ್ಯಾಧಾರಗಳನ್ನು ಒದಗಿಸಿ ಶಿಕ್ಷೆಯಾಗುವಂತೆ ಮಾಡಬೇಕು. ಆದರೆ, ಅಟ್ರಾಸಿಟಿ ಪ್ರಕರಣಗಳಲ್ಲಿ ತನಿಖಾಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಆರೋಪಿತರು ರಾಜಾರೋಷವಾಗಿ ಓಡಾಡುತ್ತಿರುವುದು ವರದಿಯಾಗಿದೆ ಎಂದು ಸಚಿವರು ತಿಳಿಸಿದರು.
ನಿಯಮಾನುಸಾರ ಕ್ರಮ ವಹಿಸದೇ ಬಾಕಿ ಉಳಿದಿರುವ ಪ್ರಕರಣಗಳನ್ನು ತನಿಖೆ ಮಾಡಿ 60 ದಿನದೊಳಗಾಗಿ ದೋಷಾರೋಪಣಾ ಪಟ್ಟಿ ಸಲ್ಲಿಸಬೇಕು. ನಿರ್ಲಕ್ಷ್ಯ ಮಾಡಿದ ತನಿಖಾಧಿಕಾರಿ ಗಳ ಜೊತೆಗೆ ಎಸ್ಪಿ ಹಾಗೂ ಜಿಲ್ಲಾಧಿಕಾರಿಗಳನ್ನೂ ಜವಾಬ್ದಾರರನ್ನಾಗಿ ಮಾಡಲಾಗುತ್ತದೆ ಎಂದು ಡಾ. ಮಹದೇವಪ್ಪ ಖಡಕ್ ಎಚ್ಚರಿಕೆ ನೀಡಿದರು.
ಪ್ರಕರಣ ದಾಖಲಿಸಿ ತೊಂದರೆ ಕೊಡುವುದು ಈ ಕಾಯ್ದೆಯ ಉದ್ದೇಶವಲ್ಲ. ಆದರೆ, ಪರಿಶಿಷ್ಟ ಜಾತಿ, ಪಂಗಡದವರ ಮೇಲಿನ ದೌರ್ಜನ್ಯ, ಜಾತಿ ನಿಂದನೆ ತಪ್ಪಿಸಿ ಸೌಹಾರ್ಧಯುತವಾಗಿ ಸ್ವಾಭಿಮಾನದಿಂದ ಜೀವನ ನಡೆಸಬೇಕೆಂಬುದು ಮುಖ್ಯ. ನೀವು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡದಿದ್ದರೆ ಇಂತಹ ಪ್ರಕರಣಗಳು ಜಾಸ್ತಿಯಾಗುತ್ತವೆ ಎಂದು ಅವರು ನುಡಿದರಲ್ಲದೆ ಸರಿಯಾಗಿ ತನಿಖೆ ನಡೆಸದೇ ನಿರ್ಲಕ್ಷ್ಯ ವಹಿಸಿದ ತನಿಖಾಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡರೆ ಅಂತಹ ಪರಿಸ್ಥಿತಿ ಬರುವುದಿಲ್ಲ. ಆದ್ದರಿಂದಲೇ ಉನ್ನತ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕಾಗಿದೆ ಎಂದು ಸಚಿವರು ಇದೇ ಸಂದರ್ಭ ತಿಳಿಸಿದರು.
ನಂತರ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಕೆ. ರಾಕೇಶ್ಕುಮಾರ್ ಮಾತನಾಡಿ, ಮೈಸೂರು ವಿಭಾಗದ ಜಿಲ್ಲೆಗಳಲ್ಲಿ ಕಳೆದ ಒಂದು ವರ್ಷದಲ್ಲಿ 432 ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದು, ಆ ಪೈಕಿ ಹಲವು ಪ್ರಕರಣಗಳು ಚಾರ್ಜ್ ಶೀಟ್ ಸಲ್ಲಿಕೆಗೆ ಬಾಕಿ ಉಳಿದಿವೆ. ಅತೀ ಹೆಚ್ಚು ಪ್ರಕರಣ ಬಾಕಿ ಇರುವ ಜಿಲ್ಲೆಗಳ ಎಸ್ಪಿಗಳು ತಮ್ಮ ಅಧೀನ ಪೊಲೀಸ್ ನಡ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಹಾಸ್ಟೆಲ್ ಗಳಲ್ಲಿ ಗುಣಮಟ್ಟದ ಆಹಾರ ಕಲ್ಪಿಸಲು ಸೂಚನೆ: ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಹಾಗೂ ವಿದ್ಯಾಭ್ಯಾಸಕ್ಕೆ ಉತ್ತಮ ವಾತಾವರಣ ಒದಗಿಸಲು ಇಂದಿಲ್ಲಿ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್ಗಳಲ್ಲಿ ಮಂಜೂರಾತಿಗಿಂತ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.
ಆದರೆ ಅತೀ ಹೆಚ್ಚು ಎಸ್ಸಿ, ಎಸ್ಟಿ ಜನಸಂಖ್ಯೆ ಇರುವ ಚಾಮರಾಜನಗರದಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಸೌಲಭ್ಯ ದೊರೆಯುತ್ತಿಲ್ಲ ಎಂದರ್ಥ. ಹಾಗಾದರೆ ಇಲಾಖೆ ಅನುದಾನ ಏಕೆ ಕೊಡ ಬೇಕು ಎಂದು ಪ್ರಶ್ನಿಸಿದರು. ಮೈಸೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಮಂಜೂರಾತಿಗಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಅವಕಾಶ ನೀಡಿರುವುದು ಸರಿಯಷ್ಟೇ.
ಆದರೆ ಸೂಕ್ತ ಸೌಲಭ್ಯದ ಕೊರತೆಯಾಗಿ ಅವರ ಕಲಿಕೆ ಮೇಲೆ ಪರಿಣಾಮ ಬೀರದಂತೆ ಕ್ರಮ ವಹಿಸಬೇಕು. ಅಗತ್ಯ ಬಿದ್ದರೆ ಖಾಸಗಿ ಕಟ್ಟಡ ಬಾಡಿಗೆಗೆ ಪಡೆದು ವಾಸ್ತವ್ಯಕ್ಕೆ ಅನುಕೂಲ ಮಾಡಿ ಎಂದು ಡಾ. ಮಹದೇವಪ್ಪ ಸಲಹೆ ನೀಡಿದರು. ಹಾಸ್ಟೆಲ್ ಅಡುಗೆ ಮಾಡುವವರಿಗೆ ಖಾಸಗಿ ಹೋಟೆಲ್ ಕುಕ್ಗಳನ್ನು ಕರೆಸಿ ತರಬೇತಿ ಕೊಡಿಸಿ ಶುಚಿತ್ವ, ಗುಣಮಟ್ಟದ ಆಹಾರ ತಯಾರಿಕೆ ಬಗ್ಗೆ ತಿಳುವಳಿಕೆ ಮೂಡಿಸುವ ಅಗತ್ಯವಿದೆ. ಅದಕ್ಕೆ ಇಲಾಖೆಯಿಂದ ಅನುದಾನ ಕೊಡಿಸಲಾಗುವುದು ಎಂದ ಅವರು, ಮಕ್ಕಳಿಗೆ ಇಂಗ್ಲಿಷ್ ಭಾಷೆ, ಗಣಿತ, ವಿಜ್ಞಾನ ವಿಷಯಗಳಲ್ಲಿ ವಿಶೇಷ ಶಿಕ್ಷಣ ನೀಡಿ ಜ್ಞಾನವಂತರನ್ನಾಗಿ ಮಾಡುವ ಮೂಲಕ ಮುಂದಿನ ಉನ್ನತ ಶಿಕ್ಷಣಕ್ಕೆ ಅವಕಾಶ ಸಿಗುವಂತೆ ಮಾಡಿ ಎಂದು ತಿಳಿಸಿದರು.
ಈ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಮಣಿವಣ್ಣನ್. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್. ಪೋಲೀಸ್ ಅಧಿಕಾರಿ ಕವಿತಾ. ಬುಡಕಟ್ಟು ಕಲ್ಯಾಣ ಇಲಾಖೆ ಜಿಲ್ಲಾ ನಿರ್ದೇಶಕ ಮುನಿರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.