ಬೆಂಗಳೂರು: ಕಳೆದ ರಾತ್ರಿ ನಗರದಲ್ಲಿ ಜೋರಾಗಿ ಮಳೆ ಸುರಿಯುವ ಸಂದರ್ಭದಲ್ಲಿ ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಬಿಎಂಪಿಯ ವಾರ್ ರೂಂಗೆ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದಾರೆ.
ಪಾಲಿಕೆಯ ಎಲ್ಲ ವಲಯಗಳಲ್ಲಿ ಸ್ಥಿತಿ ಹೇಗಿದೆ ಅನ್ನೋದನ್ನು ಆಯಾ ವಲಯದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು. ರಾತ್ರಿ ಸುರಿದಿದ್ದು ಭಾರೀ ಮಳೆ, ಆದರೆ ನಗರದಲ್ಲಿ ಚಿಕ್ಕ ಪ್ರಮಾಣದ ಮಳೆ ಸುರಿದರೂ ರಸ್ತೆಗಳು ಜಲಾವೃತಗೊಳ್ಳುತ್ತವೆ, ವಾಹನ ಸಂಚಾರ ಸ್ಥಗಿತಗೊಳ್ಳುತ್ತದೆ.
ವಲಯಗಳ ಸ್ಥಿತಿಗತಿಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಲೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಿವಕುಮಾರ್, ಮಳೆ ಇಲ್ಲದೆ ಕಂಗೆಟ್ಟಿದ್ದ ನಗರದಲ್ಲಿ ಮಳೆ ಸುರಿಯುತ್ತಿರೋದು ಸಂತಸ ನೀಡಿದರೂ ನಗರದ ಯಾವುದೇ ಭಾಗದಲ್ಲಿ ಟ್ರಾಫಿಕ್, ಮರಗಳ ಉರುಳುವಿಕೆ, ರಸ್ತೆಗಳಲ್ಲಿ ನೀರು ಮೊದಲಾದ ಸಮಸ್ಯೆಗಳನ್ನು ಖುದ್ದು ಸ್ಥಳಗಳಲ್ಲಿ ಹಾಜರಿದ್ದು ನಿಗಾ ವಹಿಸುವಂತೆ ಜಂಟಿ ಕಮೀಶನರ್, ಕಮೀಶನರ್ ಮತ್ತು ಇಂಜಿನೀಯರ್ ಗಳಿಗೆ ಸೂಚನೆ ನೀಡಲಾಗಿದೆ ಅಂತ ಹೇಳಿದರು.