ಬೆಂಗಳೂರು: ಬಾಣಸವಾಡಿ ಠಾಣೆಯ ಇನ್ಸ್ಪೆಕ್ಟರ್ ಹಾಗೂ ಎಸಿಪಿ ಅವರಿಗೆ ಚಾಕುವಿನಿಂದ ಇರಿದು ಕೊಲೆ ಮಾಡುವುದಾಗಿ ಪೊಲೀಸ್ ಪೇದೆಯೊಬ್ಬ ಜೀವ ಬೆದರಿಕೆ ಹಾಕಿರುವ ವರದಿಗಳನ್ನು ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ತಳ್ಳಿಹಾಕಿದ್ದಾರೆ.
ಪೇದೆ ರೇಣುಕಾ ನಾಯಕ್ ಇನ್ಸ್ಪೆಕ್ಟರ್ ಗಾಗಲಿ, ಹಾಗೂ ಎಸಿಪಿ ಅವರಿಗಾಗಲಿ ಜೀವ ಬೆದರಿಕೆ ಹಾಕಿರುವುದು ಸುಳ್ಳು ಎಂದು ಜೈನ್ ಸ್ಪಷ್ಟಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಬೆಂಗಳೂರಿನ ಬಾಣಸವಾಡಿ ವ್ಯಾಪ್ತಿಯ ರೌಡಿ ಕಾರ್ತಿಕೇಯನ್ ಹತ್ಯೆಯಾಗಿತ್ತು. ಈ ಕೃತ್ಯದಲ್ಲಿ ಕರ್ತವ್ಯಲೋಪ ಎಸಗಿರುವ ಆರೋಪದ ಮೇಲೆ ಪೊಲೀಸ್ ಪೇದೆಗಳಾದ ಸಂತೋಷ್, ಪುಟ್ಟಸ್ವಾಮಿ, ವಿನೋದ್ ಅವರನ್ನು ಅಮಾನತುಗೊಳಿಸಲಾಗಿತ್ತು.
ಪೊಲೀಸ್ ಪೇದೆ ರೇಣುಕಾ ನಾಯಕ್ ಅವರನ್ನೂ ಅಮಾನತು ಮಾಡುವಂತೆ ಶಿಫಾರಸು ಮಾಡಲಾಗಿತ್ತು. ತನ್ನ ಹೆಸರನ್ನು ಅಮಾನತು ಶಿಕ್ಷೆಗೆ ಶಿಫಾರಸು ಮಾಡಿದ ಕಾರಣಕ್ಕೆ ಬಾಣಸವಾಡಿ ಉಪ ವಿಭಾಗದ ಎಸಿಪಿ ಹಾಗೂ ಇನ್ಸ್ಪೆಕ್ಟರ್ ಅವರಿಗೆ ಪೇದೆ ರೇಣುಕಾ ನಾಯಕ್ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಆತಂಕಗೊಂಡ ಎಸಿಪಿ ಅವರು, ಕೊನೆ ಕ್ಷಣದಲ್ಲಿ ತಮ್ಮ ಶಿಫಾರಸು ಹಿಂಪಡೆದು. ಒಂದು ತಿಂಗಳು ರಜೆ ಕೊಟ್ಟು ಕಳಿಸಿದ್ದಾರೆ ಎನ್ನುವ ವರದಿಗಳನ್ನು ಅವರು ನಿರಾಕರಿಸಿದ್ದಾರೆ.