ಕೋಲಾರ: ನಗರದ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಮಕ್ಕಳಿಂದ ಗೋಡೆ ತೆರವು ಮತ್ತು ಸ್ವಚ್ಚತಾ ಕಾರ್ಯ ಮಾಡಿಸಲಾಗಿದೆ ಎಂಬ ಆರೋಪಗಳು ಮಾಧ್ಯಮಗಳ ಮೂಲಕ ಕೇಳಿ ಬಂದ ಹಿನ್ನಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರಲ್ಲದೇ ಘಟನೆ ಕುರಿತು ಕಾರಣ ಕೇಳಿ ಉಪಪ್ರಾಂಶುಪಾಲರಾದ ರಾಧಮ್ಮ ಅವರಿಗೆ ನೋಟೀಸ್ ಜಾರಿ ಮಾಡಿದರು.
ಕಳೆದ ಶುಕ್ರವಾರದಂದು ಮಕ್ಕಳಿಂದ ಈ ಕೆಲಸ ಮಾಡಿಸಿದ್ದು ಅದರ ವಿರುದ್ದ ಕೆಲವು ಸಂಘಟನೆಗಳು ಕ್ರಮಕ್ಕೂ ಆಗ್ರಹಿಸಿದ್ದವಲ್ಲದೇ ಈ ಕುರಿತ ಸುದ್ದಿಯೂ ಪ್ರಸಾರವಾಗಿತ್ತು.ಈ ಸಂಬಂಧ ಸ್ಥಳಕ್ಕೆ ಬಂದಿದ್ದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಡಿಪಿಐ ಕೃಷ್ಣಮೂರ್ತಿ, ಘಟನೆ ನನ್ನ ಗಮನಕ್ಕೆ ಬಂದಿದೆ ಈ ಹಿನ್ನಲೆಯಲ್ಲಿ ಉಪಪ್ರಾಂಶುಪಾಲರಿಗೆ ನೋಟೀಸ್ ನೀಡಿದ್ದೇನೆ ಜತೆಗೆ ಮೂವರು ಅಧಿಕಾರಿಗಳ ತಂಡ ರಚಿಸಿ ಇಡೀ ಘಟನೆ ಕುರಿತಂತೆ ವರದಿ ನೀಡಲು ಸೂಚಿಸಿದ್ದೇನೆ ಎಂದರು.
ತನಿಖೆಗೆ ನೇಮಕಗೊಂಡ ಅಧಿಕಾರಿಗಳ ತಂಡ ನೀಡುವ ವರದಿ ಆಧರಿಸಿ ಕಾನೂನು ರೀತ್ಯ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಪ್ರವೀಣ್, ಉಪಪ್ರಾಂಶುಪಾಲೆ ರಾಧಮ್ಮ ಹಾಗೂ ಶಿಕ್ಷಕರು ಹಾಜರಿದ್ದರು.