ನೆಲಮಂಗಲ: ಬೆಂಗಳೂರಿನ ದಾಸನಪುರದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ 6 ವರ್ಷದ ಗಂಡು ಚಿರತೆಯ ಮೃತದೇಹ ಪತ್ತೆಯಾಗಿದೆ. ಮೇಲ್ನೋಟಕ್ಕೆ ಹಿಟ್ ಅಂಡ್ ರನ್ಗೆ ಚಿರತೆ ಸಾವಿಗೀಡಾಗಿದೆ ಎಂದು ತಿಳಿದುಬಂದಿದೆ. ಆದರೆ, ಯಾರೊ ಚಿರತೆಯನ್ನು ಕೊಂದು ಬಿಸಾಡಿದಿದ್ದಾರೆ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಚಿರತೆ ಸಾವಿಗೆ ಕಾರಣ ತಿಳಿದು ಬರಲಿದೆ.
ಆರ್ಎಫ್ಒ ಗೋವಿಂದರಾಜು ನೇತೃತ್ವದಲ್ಲಿ ಚಿರತೆ ಮರಣೋತ್ತರ ಪರೀಕ್ಷೆ ನೆರವೇರಲಿದೆ.ಪ್ರಕರಣ ಸಂಬಂಧ ಬೆಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಮಾತನಾಡಿ, ಬೆಳಗಿನ ಜಾವ 3ಗಂಟೆಗೆ ನೆಲಮಂಗಲ ಸಂಚಾರಿ ಪೊಲೀಸರು ಅಪಘಾತದಲ್ಲಿ ಚಿರತೆ ಸಾವನ್ನಪ್ಪಿದರ ಬಗ್ಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ, 6 ವರ್ಷದ ಗಂಡು ಚಿರತೆ ಮೃತಪಟ್ಟಿದೆ. ಸದ್ಯ ಚಿರತೆ ಶವವನ್ನು ನಗರೂರಿನ ನರ್ಸರಿಯಲ್ಲಿ ಇಡಲಾಗಿದೆ. ದಾಸನಪುರ ಪಶು ಚಿಕಿತ್ಸಾಲಯದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಚಿರತೆ ಸಾವಿಗೆ ಕಾರಣ ತಿಳಿದು ಬರಲಿದೆ ಎಂದರು.