ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ನಿಗದಿಗೊಳಿಸಿದ್ದ ಅಂತಿಮ ಗಡುವು ಸೋಮವಾರ ಮುಕ್ತಾಯವಾಯಿತು.
ಆದರೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ತಾವು ಕೋಚ್ ಹುದ್ದೆಗೆ ಆಕಾಂಕ್ಷಿಯಾಗಿರುವರೇ ಎಂಬುದರ ಕುರಿತು ಮೌನ ಮುರಿದಿಲ್ಲ.
ಈ ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿರುವ ಗೌತಮ್ ಅವರು ಭಾರತ ತಂಡದ ಕೋಚ್ ಹುದ್ದೆ ಆಕಾಂಕ್ಷಿಯಾಗಿದ್ದಾರೆಂಬ ಮಾತುಗಳೂ ಕೇಳಿಬಂದಿದ್ದವು. ಭಾನುವಾರ ಚೆನ್ನೈನಲ್ಲಿ ಐಪಿಎಲ್ ಫೈನಲ್ ಮುಗಿದ ನಂತರ ಕೋಲ್ಕತ್ತ ತಂಡದ ಮಾಲೀಕ ಶಾರೂಕ್ ಖಾನ್ ಅವರು ಗಂಭೀರ್ ಅವರನ್ನು ತಮ್ಮ ಫ್ರ್ಯಾಂಚೈಸಿಯೊಂದಿಗೆ ಉಳಿಸಿಕೊಳ್ಳಲು ಪ್ರಯತ್ನಿಸಿರುವ ಕುರಿತು ಮಾತನಾಡಿದ್ದಾರೆಂದೂ ಹೇಳಲಾಗಿದೆ.
ಆದರೆ ಗೌತಮ್ ಆಗಲಿ ಅಥವಾ ಬೇರೆ ಮಾಜಿ ಆಟಗಾರರಾಗಲಿ ಅರ್ಜಿ ಸಲ್ಲಿಸಿದ ಕುರಿತು ಇದುವರೆಗೆ ಹೇಳಿಕೊಂಡಿಲ್ಲ. ಬಿಸಿಸಿಐನಿಂದ ಕೂಡ ಅಧಿಕೃತ ಹೇಳಿಕೆ ಬಂದಿಲ್ಲ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರ ಹೆಸರು ಕೂಡ ಕೋಚ್ ಹುದ್ದೆಗೆ ಕೇಳಿಬರುತ್ತಿದೆ. ಕೆಲವು ವಿದೇಶಿ ಕೋಚ್ಗಳೂ ಅರ್ಜಿ ಸಲ್ಲಿಸಿರು ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. `ಟಿ20 ವಿಶ್ವಕಪ್ ಟೂರ್ನಿಯು ಇನ್ನೇನು ಆರಂಭವಾಗಲಿದೆ. ಆದ್ದರಿಂದ ಬಿಸಿಸಿಐ ಅರ್ಜಿಗಳ ಪರಿಶೀಲನೆ ಮತ್ತು ಪ್ರಕ್ರಿಯೆಗಳಿಗೆ ಇನ್ನಷ್ಟು ಸಮಯ ತೆಗೆದುಕೊಳ್ಳಬಹುದು’ ಎಂದು ಮೂಲಗಳು ತಿಳಿಸಿವೆ.