ಕನಕಪುರ: ತಾಲ್ಲೂಕಿನ ಪ್ರವಾಸಿ ತಾಣ ಸಂಗಮದಲ್ಲಿ ಐದು ಜನ ಕಾಲೇಜಿನ ವಿದ್ಯಾರ್ಥಿಗಳು ಈಜಾಡಲು ಹೋಗಿ ನೀರಿ ನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜರುಗಿದೆ.ಬೆಂಗಳೂರು ಮೂಲದ ಐದು ಜನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರವಾಸಕ್ಕೆ ಎಂದು ತಾಲ್ಲೂಕಿನ ಸಂಗಮ ಬಳಿಗೆ ಬಂದು ಕಾವೇರಿ ನದಿಯಲ್ಲಿ ಆಟ ವಾಡುತ್ತಿದ್ದ ವೇಳೆ ನೀರಿನ ಸುಳಿಗೆ ಸಿಲುಕಿ ಇಬ್ಬರು ಯುವಕರು ಹಾಗೂ ಮೂವರು ಯುವತಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ರಾಜಾಜಿನಗರದ ಕೆ ಎಲ್ ಇ ಕಾಲೇಜಿನ ವರ್ಷ (20), ಮಲ್ಲೇಶ್ವರಂ ಸರ್ಕಾರಿ ಕಾಲೇಜಿನ ಬಿಹಾರ ಮೂಲದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಅಭಿಷೇಕ್ (20), ಮಂಡ್ಯದ ಆರ್ ಆರ್ ಕಾಲೇಜಿನ ಎರಡನೇ ವರ್ಷದ ಮಂಡ್ಯ ಜಿಲ್ಲೆಯ ಚಿಕ್ಕಬಾಣವರದ ಅರ್ಪಿತಾ (20), ಚಿತ್ರದುರ್ಗ ಮೂಲದ ವಿಜಯನಗರ ಸರ್ಕಾರಿ ಬಿ ಸಿ ಎ ಎರಡನೇ ವರ್ಷದ ವಿದ್ಯಾರ್ಥಿ ತೇಜಸ್, ಆರ್ ಆರ್ ನಗರ ಕಾಲೇಜಿನ ವಿದ್ಯಾರ್ಥಿನಿ ನೇಹಾ (19) ಮೃತ ದುರ್ದೈವಿಗಳಾ ಗಿದ್ದು, ಟಿ ಟಿ. ವಾಹನದಲ್ಲಿ ಬಂದಿದ್ದ ಹನ್ನೆರಡು ಜನ ವಿದ್ಯಾರ್ಥಿಗಳು ಸಂಗಮ ಬಳಿಯ ಕಾವೇರಿ ನದಿಯಲ್ಲಿ ಆಟ ವಾಡುವ ವೇಳೆ ಈ ಐದು ಜನ ವಿದ್ಯಾರ್ಥಿಗಳು ನೀರಿನಲ್ಲಿ ಕಾಲು ಜಾರಿ ಬಿದ್ದು ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ.
ವಿಷಯ ತಿಳಿದ ತಕ್ಷಣ ಸಾತನೂರು ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು ಆಗಮಿಸಿ ಮೃತದೇಹ ಗಳನ್ನು ನೀರಿನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಿರುವುದಾಗಿ ತಿಳಿದು ಬಂದಿದೆ.ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ವಾಗಿರುವ ಸಂಗಮ ಮೇಕೆದಾಟು ಬಳಿ ಈ ರೀತಿಯ ಅವಘಡಗಳು ಸಂಭವಿಸುತ್ತಿ ದ್ದರೂ ಸಹ ಅರಣ್ಯ ಅಧಿಕಾರಿಗಳಾಗಲೀ ಸ್ಥಳೀಯವಾಗಿರುವ (ಇಡಿಸಿ)ಪರಿಸರ ಅಭಿವೃದ್ಧಿ ಸಮಿತಿ ಸದಸ್ಯರಾಲೀ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದಿರುವುದೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಪ್ರವಾಸಿತಾಣದಲ್ಲಿ ಇಂತಹ ಅವಘಡಗಳು ನಡೆಯುತ್ತಿದ್ದು ಎಷ್ಟೋ ಅಮಾಯಕ ಜೀವಗಳು ಬಲಿಯಾಗಿರುವ ಘಟನೆ ಜರುಗಿದೆ,ಪ್ರವಾಸಿಗರ ರಕ್ಷಣೆಗಾಗಿ ಸ್ಥಳೀಯವಾಗಿ ಪರಿಸರ ಜಾಗೃತಿ ಹಾಗೂ ಅಭಿವೃದ್ಧಿ ಸಮಿತಿ ನೇಮಿಸಿದ್ದು ಅದು ನೆಪ ಮಾತ್ರಕ್ಕೆ ಎಂಬಂತೆ ಇದ್ದು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತ ಪ್ರವಾಸಕ್ಕೆ ಎಂದು ಬರುವ ಸಾರ್ವಜನಿಕರಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುವುದರ ಜೊತೆಗೆ ನೀರಿನ ಅಪಾಯದ ಮುನ್ಸೂಚನೆಯ ಬಗ್ಗೆ ನಾಮಫಲಕಗಳನ್ನು ಹಾಕಿ ನಿಯಮ ಮೀರಿದವರಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಅಮಾಯಕ ಜೀವಗಳ ರಕ್ಷಣೆಗೆ ಮುಂದಾಗುವಂತೆ ಆಗ್ರಹಿಸಿದ್ದಾರೆ.