ಗೌರಿಬಿದನೂರು: ಬೆಳೆ ವೈಫಲ್ಯದಿಂದ ನೊಂದ ರೈತನೊಬ್ಬ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ತೊಂಡೇಬಾವಿ ಹೋಬಳಿಯ ಕುಂಟಚಿಕ್ಕನಹಳ್ಳಿಯಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ.
ಆತ್ಮಹತ್ಯೆಗೆ ಶರಣಾದ ರೈತನನ್ನು ತಿಮ್ಮಯ್ಯ (56) ಎಂದು ಗುರುತಿಸಲಾಗಿದೆ. ತಿಮ್ಮಯ್ಯನಿಗೆ ಇಬ್ಬರು ಗಂಡು ಮಕ್ಕಳಿದ್ದು, ಇಬ್ಬರೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ತನ್ನ ಜಮೀನಿನಲ್ಲಿ ಕೊರೆಸಿದ್ದ ಕೊಳವೆ ಬಾವಿಯಲ್ಲಿ ಜಮೀನಿಗೆ ಸಾಕಾಗುವಷ್ಟು ನೀರು ಸಿಕ್ಕಿತ್ತು. ಈ ವರ್ಷ ಬಾಳೆ, ಟಮೋಟೋ, ಹೂವಿನ ಬೆಳೆಯನ್ನು ಬೆಳೆದಿದ್ದರು. ಟಮೋಟೋಗೆ ರೋಗ ತಾಕಿ ನಷ್ಟವುಂಟಾದರೆ, ಹೂವಿಗೆ ಉತ್ತಮ ಬೆಲೆ ದೊರೆಯದೆ ನಷ್ಟಕ್ಕೆ ಗುರಿಯಾದರು.
ಬೆಳೆಯಿಡಲು ಬ್ಯಾಂಕ್, ಧರ್ಮಸ್ಥಳದ ಸಂಘ ಮತ್ತು ಸ್ತ್ರೀಶಕ್ತಿ ಸಂಘದಿಂದ ಸಾಲ ಪಡೆದಿದ್ದರು. ಅದರ ಬಡ್ಡಿ ವಿಷವೇರಿದಂತೆ ಬೆಳೆಯುತ್ತಿತ್ತು. ಒಂದು ಕಡೆಯ ಬೆಳೆಯ ವೈಫಲ್ಯ ಬೆಲೆಯ ಕುಸಿತ, ಮತ್ತೊಂದು ಕಡೆದ ಸಾಲದ ಬಡ್ಡಿಯ ಹೆಚ್ಚಳ. ಇದರಿಂದ ಧೃತಿಗೆಟ್ಟ ತಿಮ್ಮಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಭಾನುವಾರ ಬೆಳಗ್ಗೆ ತನ್ನ ಜಮೀನಿಗೆ ಹೋದ ತಿಮ್ಮಯ್ಯ ಊಟದ ಸಮಯವಾದರೂ ಮನೆಗೆ ಮರಳಲಿಲ್ಲ. ಇದರಿಂದ ಅನುಮಾನಗೊಂಡ ಅವರ ಪತ್ನಿ, ಜಮೀನಿಗೆ ಬಂದಾಗ ತಿಮ್ಮಯ್ಯ ವಿಷ ಸೇವಿಸಿ ನರಳುತ್ತಿದ್ದದ್ದು ಕಂಡು ನೆರೆಹೊರೆಯವರ ಸಹಾಯದಿಂದ ನಗರದ ಆಸ್ಪತ್ರೆಗೆ ಕರೆತಂದರು. ಇಲ್ಲಿ ಪ್ರಥಮ ಚಿಕಿತ್ಸೆ ನೀಡಿ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವೈದ್ಯರು ಸೂಚಿಸಿದಾಗ ಚಿಕ್ಕಬಳ್ಳಾಪುರಕ್ಕೆ ಕರೆದುಕೊಂಡು ಹೋದರಾದರೂ ಅಲ್ಲಿನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.