ಬುಸ್ಟೊ ಅರ್ಸಿಜಿಯೊ, ಇಟಲಿ: ಇಲ್ಲಿ ನಡೆಯುತ್ತಿರುವ ಮೊದಲ ಒಲಿಂಪಿಕ್ಸ್ ಬಾಕ್ಸಿಂಗ್ ವಿಶ್ವ ಅರ್ಹತಾ ಟೂರ್ನಿಯಲ್ಲಿ ಭಾರತದ ಅಭಿಯಾನವು ನಿರಾಶಾದಾಯಕವಾಗಿ ಪ್ರಾರಂಭವಾಯಿತು. ಪದಕದ ನಿರೀಕ್ಷೆ ಮೂಡಿಸಿದ್ದ ದೀಪಕ್ ಭೋರಿಯಾ (51 ಕೆಜಿ) ಮತ್ತು ನರೇಂದರ್ ಬರ್ವಾಲ್ (92 ಕೆಜಿ) ಆರಂಭಿಕ ಸುತ್ತಿನಲ್ಲೇ ನಿರ್ಗಮಿಸಿದರು.
ವಿಶ್ವ ಚಾಂಪಿಯನ್ಷಿಪ್ನ ಕಂಚಿನ ಪದಕ ವಿಜೇತ ದೀಪಕ್ ಭೋರಿಯಾ (51 ಕೆಜಿ) ಅವರು 64ರ ಘಟ್ಟದ ಅಜರ್ಬೈಜಾನ್ನ ಹುಸೇನೊವ್ ನಿಜತ್ ವಿರುದ್ಧ ಮುಗ್ಗರಿಸಿದರು.2019ರ ವಿಶ್ವ ಚಾಂಪಿಯನ್ಷಿಪ್ನ ಬೆಳ್ಳಿ ಪದಕ ವಿಜೇತ ಅಮಿತ್ ಪಂಘಲ್ ಅವರನ್ನು ಹಿಂದಿಕ್ಕಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಭೋರಿಯಾ ಅವರು 2-3ರಿಂದ ಹುಸೇನೊವ್ ಅವರಿಗೆ ಮಣಿದರು.
ಮೊದಲ ಎರಡು ಸುತ್ತುಗಳಲ್ಲಿ ಇಬ್ಬರೂ ಬಾಕ್ಸರ್ಗಳ ನಡುವೆ ತೀವ್ರ ಪೈಪೋಟಿ ಕಂಡುಬಂತು. ಆದರೆ, ಹುಸೇನೊವ್ ಅವರು ವೇಗದ ಚಲನೆಯ ಲಾಭ ಪಡೆದು, ರಿಂಗ್ನಲ್ಲಿ ಭೋರಿಯಾ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಅಂತಿಮ ಮೂರು ನಿಮಿಷದಲ್ಲಿ ಭಾರತದ ಸ್ಪರ್ಧಿ ತಿರುಗೇಟು ನೀಡಿದರೂ ಅದು ಗೆಲುವಿಗೆ ಸಾಕಾಗಲಿಲ್ಲ. ನರೇಂದರ್ ಅವರು ಜರ್ಮನಿಯ ನೆಲ್ವಿ ಟಿಯಾಫಕ್ ವಿರುದ್ಧ 3-2ರಿಂದ ಪರಾಭವಗೊಂಡರು. ಆರಂಭಿಕ ಸುತ್ತಿನಲ್ಲಿ ಮೇಲುಗೈ ಸಾಧಿಸಿದ್ಧ ಭಾರತದ ಬಾಕ್ಸರ್ ನಂತರದ ಸುತ್ತಿನಲ್ಲಿ ಮುಗ್ಗರಿಸಿದರು.