ಬೆಂಗಳೂರು: ಅಬುಧಾಬಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಪ್ರಮುಖ ಬ್ರಾಂಡ್ ಆಗಿರುವ ಎಕ್ಸ್ ಪೀರಿಯನ್ಸ್ ಅಬುಧಾಬಿ ಸಂಸ್ಥೆಯು ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯವರನ್ನು ತನ್ನ ಹೊಸ ರೀಜನಲ್ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿದೆ. ಬಾಲಿವುಡ್ ನಟ ರಣವೀರ್ ಸಿಂಗ್ ಈಗಾಗಲೇ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ರಣವೀರ್ ೨೦೨೩ರಿಂದ ಎಕ್ಸ್ ಪೀರಿಯನ್ಸ್ ಅಬುಧಾಬಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಜಾಲಿವುಡ್ ಜೋಡಿಯೊಂದು ಅಬುಧಾಬಿ ಪ್ರವಾಸೋದ್ಯಮವನ್ನು ಜಂಟಿಯಾಗಿ ಪ್ರತಿನಿಧಿಸುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಜೋಡಿ ಅಬುಧಾಬಿಯು ಪ್ರವಾಸಿಗರಿಗೆ ವೈಯಕ್ತಿಕವಾಗಿ ಮತ್ತು ವಾಸ್ತವಿಕವಾಗಿ ಹೇಗೆ ಕನೆಕ್ಟ್ ಆಗುತ್ತದೆ ಎಂದು ತೋರಿಸಲಿದೆ.
ರಣವೀರ್ ಸಿಂಗ್ ಅವರು ಮಾತನಾಡಿ, ಅಬುಧಾಬಿಯು ಕೌಟುಂಬಿಕ ಪ್ರವಾಸಕ್ಕೆ ಸೂಕ್ತವಾಗಿದೆ. ಇಲ್ಲಿ ಅಡ್ವೆಂಚರ್, ಬೀಚ್, ಮನರಂಜನೆ ಎಲ್ಲವೂ ಇದೆ. ಈ ನಗರದ ಕತೆಯನ್ನು ವಿಶ್ವದೊಂದಿಗೆ ಹಂಚಿಕೊಳ್ಳುತ್ತಿರುವುದಕ್ಕೆ ನಾನು ಹೆಮ್ಮೆಪಡುತ್ತೇನೆ ಮತ್ತು ಈಗ ನನ್ನ ಪತ್ನಿ ದೀಪಿಕಾ ಕೂಡ ಬ್ರಾಂಡ್ ಅಂಬಾಸಿಡರ್ ಆಗಿ ಸೇರಿರುವುದು ನನಗೆ ಇನ್ನಷ್ಟು ಸಂತೋಷವನ್ನು ತಂದಿದೆ. ಅಬುಧಾಬಿಯಲ್ಲಿ ಕುಟುಂಬ ಸ್ನೇಹಿ ಸೌಲಭ್ಯಗಳಿವೆ ಮತ್ತು ಸೊಗಸಾದ ಜಾಗಗಳಿವೆ. ಇದು ಅವಿಸ್ಮರಣೀಯ ನೆನಪುಗಳನ್ನು ಕಟ್ಟಿಕೊಡುವ ಸ್ಥಳವಾಗಿದೆ ಎಂದು ಹೇಳಿದರು.
ಈ ಕುರಿತು ದೀಪಿಕಾ ಪಡುಕೋಣೆ ಅವರು, ಪ್ರೀತಿಪಾತ್ರರ ಜೊತೆಗಿನ ಪ್ರವಾಸ ಯಾವಾಗಲೂ ಹೆಚ್ಚು ಖುಷಿ ಕೊಡುತ್ತದೆ ಮತ್ತು ಅರ್ಥಪೂರ್ಣವಾಗಿರುತ್ತದೆ. ಕಳೆದ ಮೂರು ವರ್ಷಗಳಿಂದ ರಣವೀರ್ ಅಬುಧಾಬಿಯನ್ನು ಸೊಗಸಾಗಿ ಪರಿಚಯಿಸಿದ್ದಾರೆ ಮತ್ತು ಸಂಭ್ರಮಿಸಿದ್ದಾರೆ. ಈಗ ನಾನು ಕೂಡ ಅವರೊಂದಿಗೆ ಈ ಪಯಣದಲ್ಲಿ ಸೇರಿಕೊಂಡಿದ್ದೇನೆ. ಈ ಸುಂದರ ನಗರವು ನೀಡುವ ಸಂತೋಷ ಸಂಭ್ರಮವನ್ನು ಎದುರುಗೊಳ್ಳಲು ಮತ್ತು ಅನುಭವಿಸಲು ನಾನು ಕಾತುರಳಾಗಿದ್ದೇನೆ ಎಂದು ಹೇಳಿದರು