ಬೆಂಗಳೂರು: 2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿವ ಗೊಳಿಸುವ ಸಮಯಕ್ಕೆ ಹಿರಿಯರ ವಿರುದ್ಧ ಸಿಡಿದೆದ್ದ ಅತೃಪ್ತ ಗುಂಪು ಅವಹೇಳನಕಾರಿಯಾಗಿ ಮಾತನಾಡಿ ಅವಾಂತರವನ್ನೇ ಮೈಮೇಲೆ ಎಳೆದುಕೊಂಡಿದ್ದಾರೆ. ಪಟ್ಟಭದ್ರರ ಬೆದರಿಕೆಗೆ ಮಣಿದಿರುವ ರಾಜ್ಯ ಕಾಂಗ್ರೆಸ್ ಪಕ್ಷದ ವರಿಷ್ಠರು ಎಡಗೈ ಸಮುದಾಯದ ಮತಗಳನ್ನು ನಿರಾಕರಿಸುವ ಅಥವಾ ತಿರಸ್ಕರಿಸುವ ಪ್ರಯತ್ನಗಳಿಗೆ ಕುಮ್ಮಕ್ಕು ನೀಡುತ್ತಿರುವುದು ಪಕ್ಷಕ್ಕೆ ಬಹಳ ದೊಡ್ಡ ಹಿನ್ನಡೆಯಾಗಿದೆ.
ಈಗಾಗಲೇ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು ಸಾಮಾಜಿಕ ನ್ಯಾಯದ ಪ್ರತಿಪಾದನೆಯ ಆಶ್ವಾಸನೆಯನ್ನು ನೀಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದಿಂದ 28 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡುವಾಗ ಸಾಮಾಜಿಕ ನ್ಯಾಯ ನೀಡಿಕೆಯಂತೆ ಹಂಚಿಕೆ ಮಾಡಲಾಗಿದೆ. ಎಡಗೈ ಸಮುದಾಯಕ್ಕೆ ಎರಡು ಸ್ಥಾನಗಳು ಮತ್ತು ಬಲಗೈ ಸಮುದಾಯಕ್ಕೆ ಮೂರು ಸ್ಥಾನಗಳನ್ನು ನೀಡುವುದು ನಿಕ್ಕಿಯಾಗಿತ್ತು.
ಕೋಲಾರ ಮೀಸಲು ಲೋಕಸಭಾ ಕ್ಷೇತ್ರ ಮತ್ತು ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರಗಳನ್ನು ಎಡಗೈ ಸಮುದಾಯಕ್ಕೆ ನೀಡಲಾಗುವುದು ಎಂದು ಸ್ಪಷ್ಟಪಡಿಸಲಾಗಿತ್ತು. ಕೋಲಾರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಏಳು ಬಾರಿ ನಿರಂತರವಾಗಿ ಗೆಲುವು ಸಾಧಿಸಿದ್ದ ಕೆ ಹೆಚ್ ಮುನಿಯಪ್ಪ ಅವರ ಅಳಿಯ ಚಿಕ್ಕ ಪೆದ್ದಣ್ಣ ಅವರಿಗೆ ಟಿಕೆಟ್ ನೀಡಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿತ್ತು.
ಆದರೆ ಕ್ಷಿಪ್ರ ರಾಜಕೀಯ ವಿದ್ಯಮಾನಗಳು ನಡೆದು ಎಡಗೈ ಸಮುದಾಯಕ್ಕೆ ಸೇರಿದ ಕೆ.ಎಚ್. ಮುನಿಯಪ್ಪ ವಿರುದ್ಧ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿದ್ದವರು ಕ್ಷುಲ್ಲಕ ತಗಾದೆ ತೆಗೆದಿದ್ದಾರೆ . ರಾಜ್ಯ ಸರ್ಕಾರದ ಸಚಿವರ ಅಳಿಯನಿಗೆ ಟಿಕೆಟ್ ನೀಡುವುದಕ್ಕೆ ನಮ್ಮ ವಿರೋಧವಿದೆ ಎಂದು ಬಹಿರಂಗ ಹೇಳಿಕೆ ನೀಡಿ ರಾಜೀನಾಮೆ ಪ್ರಹಸವನ್ನು ನಡೆಸಲಾಗಿದೆ. ಕಾಂಗ್ರೆಸ್ ಪಕ್ಷವು ರಾಜ್ಯದ ಹಲವಾರು ಲೋಕಸಭಾ ಕ್ಷೇತ್ರಗಳಲ್ಲಿ ಸಚಿವರ ಪುತ್ರ ಮತ್ತು ಪುತ್ರಿಯರಿಗೆ ಟಿಕೆಟ್ ನೀಡಲಾಗಿದೆ.
ಆದರೆ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕೆ.ಎಚ್. ಮುನಿಯಪ್ಪ ಅವರ ಅಳಿಯ ಚಿಕ್ಕ ಪೆದ್ದಣ್ಣ ನಿಲ್ಲುವುದನ್ನು ವಿರೋಧಿಸುತ್ತಿರುವುದರ ಹಿಂದೆ ಕುತಂತ್ರ ಮತ್ತು ಷಡ್ಯಂತ್ರ ಎದ್ದು ಕಾಣುತ್ತಿದೆ. ಈ ಘಟನೆಗಳನ್ನು ನೋಡಿಯೂ ನೋಡದಂತೆ ಮೌನ ವಹಿಸಿರುವ ರಾಜ್ಯ ಕಾಂಗ್ರೆಸ್ ಮುಖಂಡರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದ ಮತ್ತು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋತವರ ಮಾತುಗಳಿಗೆ ಮನ್ನಣೆ ನೀಡುತ್ತಿರುವುದು ಸಾರ್ವ ಜನಿಕರ ಮತ್ತು ಎಡಗೈ ಸಮುದಾಯದವರಲ್ಲಿ ಹಲವಾರು ಅನುಮಾನಗಳನ್ನು ಸೃಷ್ಟಿಸಿದೆ.
2018 ಚುನಾವಣಾ ಸಮಯದಲ್ಲಿ ಎಡಗೈ ಸಮುದಾಯ ಕಾಂಗ್ರೆಸ್ ಪಕ್ಷದ ವಿರುದ್ಧ ಮತ ಚಲಾಯಿಸಿದ್ದರಿಂದ ಪಕ್ಷವು ಸೋಲನ್ನು ಕಾರಣವಾಯಿತು ಎಂದು ಸನ್ಮಾನ್ಯ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಹೇಳಿಕೆ ನೀಡಿದ್ದರು.2023ರ ಚುನಾವಣೆಯಲ್ಲಿ ಇದೇ ಎಡಗೈ ಸಮುದಾಯ ಕೆ. ಎಚ್ .ಮುನಿಯಪ್ಪ ಅವರ ನಾಯಕತ್ವಕ್ಕೆ ಸಿಕ್ಕ ಮನ್ನಣೆಯಿಂದ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದರಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಂತಾಯಿತು ಎಂದು ಸಿದ್ದರಾಮಯ್ಯ ಅವರು ಪುನರುಚ್ಚರಿಸಿದ್ದಾರೆ.
ಪರಿಸ್ಥಿತಿ ಹೀಗಿರುವಾಗ ಕೆಎಚ್ ಮುನಿಯಪ್ಪ ಅವರನ್ನು ಗುರಿಯಾಗಿಸಿಕೊಂಡು ಎಡಗೈ ಸಮುದಾಯದ ರಾಜಕೀಯ ಅಸ್ತಿತ್ವವನ್ನು ಬುಡಮೇಲು ಮಾಡಲು ಕೆಲವು ಸ್ವಾರ್ಥ ವ್ಯಕ್ತಿಗಳು ಅಸಹನೆ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ.ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯ ಅಡಿಪಾಯವನ್ನು ಬುಡಮೇಲು ಮಾಡಲು ಹೊರಟಿರುವವರನ್ನು ಕರೆದು ಬುದ್ಧಿ ಹೇಳುವುದು ರಾಜ್ಯ ಕಾಂಗ್ರೆಸ್ ಮುಖಂಡರು ಮಾಡಬೇಕು. ಇಲ್ಲವೇ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಡಗೈ ಸಮುದಾಯದ ಮುಖಂಡರು ಆಗ್ರಹಪಡಿಸಿದ್ದಾರೆ.