ಉತ್ತರಕಾಶಿ: ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಕಳೆದ 13 ದಿನಗಳಿಂದ ಸಿಲುಕಿರುವ 41 ಕಾರ್ಮಿಕರನ್ನು ಜೀವಂತವಾಗಿ ಹೊರತರುವ ರಕ್ಷಣಾ ಕಾರ್ಯಚರಣೆ ಮುಂದುವರಿದಿದ್ದು, ತಾಂತ್ರಿಕ ಕಾರಣಗಳಿಂದಾಗಿ ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ವಿಳಂಬವಾಗಿದೆ.
ಡ್ರಿಲ್ಲಿಂಗ್ ಮಷಿನ್ನಲ್ಲಿ ಪದೇ ಪದೇ ದೋಷ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ನಿಲ್ಲಿಸಲಾಯಿತು.
ಡ್ರಿಲ್ಲಿಂಗ್ ಮಷಿನ್ನಲ್ಲಿ ಕಂಡು ಬಂದಿರುವ ತಾಂತ್ರಿಕ ಸಮಸ್ಯೆ ಪತ್ತೆ ಹಚ್ಚಿ ಸರಿಪಡಿಸಲು ವಿಶೇಷ ತಂಡವನ್ನು
ಸ್ಥಳಕ್ಕೆ ಕರೆಸಲಾಗಿದೆ. ಯಂತ್ರ ಸರಿಪಡಿಸಿದ ಬಳಿಕ ಕಾರ್ಯಾಚರಣೆ ಮತ್ತೆ ಆರಂಭವಾಗಲಿದೆ.
ಕಳೆದ 13 ದಿನಗಳಿಂದ ಕಾರ್ಯಚರಣೆ ನಡೆಯುತ್ತಿದ್ದು, ಕಾರ್ಯಚರಣೆ ಮುಕ್ತಾಯಗೊಳ್ಳಬೇಕಿತ್ತು. ಆದರೆ, ಕಡೆಯ ಹಂತದ ಡ್ರಿಲ್ಲಿಂಗ್ ವೇಳೆ ತಾಂತ್ರಿಕ ಸಮಸ್ಯೆ ಎದುರಾದ ಬಳಿಕ ಕಾರ್ಯಚರಣೆ ನಿಲ್ಲಿಸಲಾಗಿತ್ತು. ಇಂದು ಬೆಳಗ್ಗೆಯಿಂದ ಮತ್ತೆ ಪುನಾರಂಭಗೊಂಡಿದ್ದು, ಈವರೆಗೂ ರಕ್ಷಣಾ ತಂಡವು 50 ಮೀಟರ್ಗಳವರೆಗೆ ಕೊರೆದಿದೆ. ಸಿಕ್ಕಿಬಿದ್ದ ಕಾರ್ಮಿಕರನ್ನು ತಲುಪಲು ಇನ್ನೂ 10 ಮೀಟರ್ಗಳು ಉಳಿದಿವೆ. ಇನ್ನು ಪೈಪ್ಗಳನ್ನು ಮೃದುವಾಗಿ ಇಳಿಸಲು 6 ಮೀಟರ್ಗಳ ಮೂರು ಪೈಪ್ಗಳನ್ನು ಬಳಸಲಾಗುತ್ತಿದೆ.
ಯಂತ್ರವು ಇಲ್ಲಿಯವರೆಗೆ 46.8 ಮೀಟರ್ ಕೊರೆದಿದ್ದು, ಒಟ್ಟು 57 ಮೀಟರ್ ಕೊರೆದು ಪೈಪ್ಗಳನ್ನು ಹಾಕುವ ಮೂಲಕ ಪ್ರತ್ಯೇಕ ದಾರಿಯನ್ನು ನಿರ್ಮಿಸಬೇಕಿದೆ. ಯಂತ್ರಕ್ಕೆ ಕಬ್ಬಿಣ ಕವಚ ಅಡ್ಡಿಯಾಗಿದ್ದು, ಅದನ್ನು ಕೊರೆಯಲಾಗದೆ ಯಂತ್ರ ಕೆಟ್ಟು ನಿಲ್ಲುತ್ತಿದೆ.
ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ನಿರಂತರವಾಗಿ ಶ್ರಮ ಹಾಕಲಾಗುತ್ತಿದೆ.
ಕೆಲವೊಮ್ಮೆ ಮೆಷಿನ್ಗಳು ಕೈಕೊಡುತ್ತಿವೆ. ಈ ಮಧ್ಯೆ ಸುರಂಗದೊಳಗೆ ಪೈಪ್ಗಳನ್ನು ಜೋಡಿಸಲು ವೆಲ್ಡಿಂಗ್ ಮಾಡುತ್ತಿರುವ ಹೊಗೆ, ಕಾರ್ಮಿಕರ ಮೂಗಿಗೆ ಬಡಿದಿದೆ. ಇದರಿಂದ ಕಾರ್ಮಿಕರಲ್ಲಿ ಸುರಂಗದಿಂದ ಹೊರಹೋಗುತ್ತೇವೆ ಎಂಬ ಆಶಾಭಾವ ಮೂಡಿದೆ. ಕಾರ್ಮಿಕರರಿಗೆ ವೆಲ್ಡಿಂಗ್ ವಾಸನೆ ತಲುಪಿರುವುದನ್ನು ವಾಕಿಟಾಕಿ ಮೂಲಕ ಕಾರ್ಮಿಕರು ಅಕಾರಿಗಳಿಗೆ ತಿಳಿಸಿದ್ದಾರೆ.