ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನರ್ ರಚನೆ ವೇಳೆ ಹಿರಿಯ ಶಾಸಕರಿಗೆ ಸಂಪುಟದಲ್ಲಿ ಅವಕಾಶ ಮಾಡಿಕೊಡಿ ಎಂಬ ಬೇಡಿಕೆಯೊಂದಿಗೆ ಶಾಸಕರ ನಿಯೋಗವೊಂದು ಪಕ್ಷದ ವರಿಷ್ಠರ ಭೇಟಿ ಮಾಡಲು ದೆಹಲಿಗೆ ತೆರಳಲಿದೆ.
ನಾಳೆ ಅಥವಾ ನಾಡಿದ್ದು, 38ರಿಂದ 40 ಸದಸ್ಯರಿರುವ ಶಾಸಕರ ನಿಯೋಗ ದೆಹಲಿಗೆ ತೆರಳುವುದಾಗಿ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಳೆದ ವಿಧಾನಸಭಾ ಅಧಿವೇಶನದ ವೇಳೆ ಸುಮಾರು 40 ಶಾಸಕರು ಸಭೆ ಸೇರಿ ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂಬ ವರಿಷ್ಠರನ್ನು ಭೇಟಿ ಮಾಡಿ ಮನವಿ ಮಾಡಲು ನಿರ್ಧರಿಸಲಾಗಿತ್ತು. ಆದರೆ ಆ ವೇಳೆಗೆ ದಾವಣಗೆರೆ ಬಾಗಲಕೋಟೆ ವಿಧಾನಸಭೆ ಉಪಚುನಾವಣೆ ಎದುರಾದವು ಇದೀಗ ಚುನಾವಣೆ ಮುಗಿದಿದೆ. ಈ ಹಿನ್ನೆಲೆಯಲ್ಲಿ ನಾವುಗಳು ದೆಹಲಿಗೆ ತೆರಳುತ್ತಿದ್ದೇವೆ. ಅವಕಾಶ ಎಂಬುದು ರಾಜಕೀಯ ಪಕ್ಷದ ಆಂತರಿಕ ವಿಚಾರ. ಕ್ಷೇತ್ರ ಪುನರ್ ವಿಂಗಡಣೆ ಮೀಸಲಾತಿ ವಿಚಾರ ಸೇರಿದಂತೆ ಹಿರಿಯರಿಗೆ ಸಂಪುಟದಲ್ಲಿ ಅವಕಾಶಕೊಡಿ ಎಂಬ ಬೇಡಿಕೆಯನ್ನು ವರಿಷ್ಠರ ಮುಂದಿಡಲಿದ್ದೇವೆ. ನಾಯಕತ್ವ ಬದಲಾವಣೆ ವಿಷಯ ನಮ್ಮ ಮುಂದೆಯಿಲ್ಲ. ಈ ಹಿಂದೆ ಸರ್ಕಾರಕ್ಕೆ ಅಸ್ಥಿತ್ವಕ್ಕೆ ಬಂದು ಸಂಪುಟ ರಚನೆ ವೇಳೆ ಎರಡೂವರೆ ವರ್ಷಗಳ ನಂತರ ಈ ಬಾರಿ ಅವಕಾಶ ದೊರೆಯದಿದ್ದವರಿಗೆ ಅವಕಾಶ ಮಾಡಿಕೊಡಲಾಗಿತ್ತು. ಈಗಾಗಲೇ ಸರ್ಕಾರ ಮೂರು ವರ್ಷಗಳು ಪೂರೈಸುತ್ತಾ ಬಂದಿದೆ. ಉಳಿದವರಿಗೆ ಈ ಬಾರಿ ಎರಡು ವರ್ಷಗಳಿಗಾದರೂ ಅವಕಾಶ ಕೊಡಿ ಎಂದು ಮನವಿ ಮಾಡಲಿದ್ದೇವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಮ್ಮ ರಾಜ್ಯದವರೆ ಆಗಿದ್ದಾರೆ. ಹಾಗಾಗಿ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.
ಈ ತಿಂಗಳ 17ರ ನಂತರ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇಬ್ಬರು ದೆಹಲಿಗೆ ತೆರಳಲಿದ್ದಾರೆ. ಅಷ್ಟರೊಳಗಾಗಿ ನಾವು ದೆಹಲಿಗೆ ಹೋಗಿ ಬರುತ್ತೇವೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದ ಡಿ.ಸುರೇಶ್, ಹಿರಿಯ ಶಾಸಕರು ದೆಹಲಿಗೆ ತೆರಳುವ ಬಗ್ಗೆ ತಮಗೇನು ಮಾಹಿತಿಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಪುಟದಲ್ಲಿ ಅವಕಾಶಕ್ಕಾಗಿ ದೆಹಲಿಗೆ ನಿಯೋಗ



