ನವದೆಹಲಿ: ಐಪಿಎಲ್ 2024 ರಲ್ಲಿ ಇಂದು ಭರ್ಜರಿ ಫಾರ್ಮ್ ನಲ್ಲಿರುವ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತವರು ದೆಹಲಿ ಮೈದಾನದಲ್ಲಿ ಪಂದ್ಯವಾಡಲಿದೆ.
ಸನ್ ರೈಸರ್ಸ್ ಹೈದರಾಬಾದ್ ಇದುವರೆಗೆ ಆಡಿದ ಎಲ್ಲಾ ಪಂದ್ಯಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದೆ. ಅದರಲ್ಲೂ ಹೈದರಾಬಾದ್ ಬ್ಯಾಟಿಂಗ್ ಉತ್ತುಂಗದಲ್ಲಿದೆ. ಇದುವರೆಗೆ ಎರಡು ಬಾರಿ ಐಪಿಎಲ್ ನಲ್ಲಿ ಗರಿಷ್ಠ ಮೊತ್ತ ದಾಖಲಿಸಿದ ದಾಖಲೆ ಮಾಡಿದ್ದಾರೆ. ಹೀಗಿರುವಾಗ ಹೈದರಾಬಾದ್ ಬ್ಯಾಟಿಂಗ್ ಗೆ ಕಡಿವಾಣ ಹಾಕುವುದು ಎದುರಾಳಿಗಳಿಗೆ ದೊಡ್ಡ ಸವಾಲು.
ಎಸ್ ಆರ್ ಎಚ್ ಪರ ಆರಂಭಿಕ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸನ್ ಹೀಗೆ ಪ್ರತಿಯೊಬ್ಬ ಬ್ಯಾಟಿಗನೂ ಅದ್ಭುತ ಕೊಡುಗೆ ನೀಡುತ್ತಿದ್ದಾರೆ. ಬೌಲಿಂಗ್ ನಲ್ಲೂ ಪ್ಯಾಟ್ ಕ್ಯುಮಿನ್ಸ್ ನೇತೃತ್ವದಲ್ಲಿ ಭುವನೇಶ್ವರ್ ಕುಮಾರ್, ಟಿ ನಟರಾಜನ್ ಸೇರಿದಂತೆ ಪ್ರತಿಭಾವಂತರಿದ್ದಾರೆ.ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಕೂಡಾ ಕಡಿಮೆಯೇನಲ್ಲ. ಆರಂಭಿಕ ಪಂದ್ಯಗಳಲ್ಲಿ ರಿಷಬ್ ಪಂತ್ ಪಡೆ ಎಡವಿದ್ದು ನಿಜ.
ಆದರೆ ಬಳಿಕ ಚೇತರಿಸಿಕೊಂಡು ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಡೆಲ್ಲಿ ಬೌಲಿಂಗ್ ಅದ್ಭುತವಾಗಿತ್ತು. ಗುಜರಾತ್ ಬ್ಯಾಟಿಗರನ್ನು ಕನಿಷ್ಠ ಮೊತ್ತಕ್ಕೆ ಕಟ್ಟಿ ಹಾಕಿತ್ತು. ಹೀಗಾಗಿ ಇದು ಡೆಲ್ಲಿ ಬೌಲಿಂಗ್ ಮತ್ತು ಹೈದರಾಬಾದ್ ಬ್ಯಾಟಿಗರ ನಡುವಿನ ಕದನ ಎಂದೂ ಹೇಳಬಹುದು. ಈ ಜಿದ್ದಾಜಿದ್ದಿನ ಪಂದ್ಯ ಎಂದಿನಂತೆ ರಾತ್ರಿ 7.30 ಕ್ಕೆ ಆರಂಭವಾಗಲಿದೆ.