ಗುಂಡ್ಲುಪೇಟೆ: ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಉಂಟಾಗಿರುವ ಕಾರಣ ಸಿರಿಧಾನ್ಯ ಮತ್ತು ಸಿರಿಧಾನ್ಯದ ಉತ್ಪನ್ನಗಳಿಗೂ ಬೇಡಿಕೆ ಹೆಚ್ಚಿದೆ. ಹೀಗಾಗಿ ಸಿರಿಧಾನ್ಯಗಳ ಸಂಸ್ಕರಣಾ ಘಟಕ ಆರಂಭಿಸಲಾಗುತ್ತದೆ. ಆಹಾರ ಧಾನ್ಯಗಳ ಸಂಸ್ಕರಣಾ ಘಟಕ ಸ್ಥಾಪನೆಗೆ ಇರುವ ಅವಕಾಶವನ್ನು ರೈತರು ಪಡೆದುಕೊಳ್ಳಬೇಕು ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ಸಲಹೆ ನೀಡಿದರು.
ಪಟ್ಟಣದ ಕೃಷಿ ಇಲಾಖೆಯಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ, ತಾಲೂಕು ಕೃಷಿಕ ಸಮಾಜ, ರೈತ ಸಂಘಟನೆಗಳು, ಕೃಷಿ
ಮತ್ತು ಕೃಷಿ ಪೂರಕ ಇಲಾಖೆಗಳ ಸಹಯೋಗ ದಲ್ಲಿ ನಡೆದ ರೈತ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷಿಮತ್ತು ಸಂಬಂಧಿತ ಇಲಾಖೆಗಳ ಸಹಯೋಗ ದಲ್ಲಿ ಆರು ತಿಂಗಳ ಕಾಲಮಿತಿಯಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕ ಆರಂಭಿಸುವುದಾಗಿ ಭರವಸೆ ನೀಡಿದರು.
ಶಾಸಕನಾದ ಪ್ರಾರಂಭದಲ್ಲೇ ಸೂರ್ಯಕಾಂತಿ, ಅರಿಶಿಣ ಬೆಲೆ ಮತ್ತು ವಿದ್ಯುತ್ ಅಭಾವದ ಹಿನ್ನೆಲೆಯಲ್ಲಿ ಸಮಸ್ಯೆಗೆ ಸ್ಪಂದಿಸಿದ್ದೇನೆ. ಕೃಷಿ ಕುಟುಂಬದ ಹಿನ್ನೆಲೆಯ ಜತೆಗೆ ಸ್ವತಃ ಕೃಷಿ ಮಾಡುತ್ತಿರುವ ಕಾರಣ ಕೃಷಿ ಕಷ್ಟದ ಕೆಲಸ ಎಂಬುದನ್ನು ತಿಳಿದುಕೊಂಡಿದ್ದೇನೆ. ಉತ್ಪಾದನಾ ವೆಚ್ಚ ಹೆಚ್ಚಳದ ಹಿನ್ನೆಲೆಯಲ್ಲಿ ಕೃಷಿ ಕಷ್ಟವಾಗುತ್ತಿದೆ. ಯುವ ಸಮುದಾಯಕ್ಕೆ ಉದ್ಯೋಗ ನೀಡಲು ಕೈಗಾರಿಕೆ ಪ್ರಾರಂಭಿಸಲು ಚಿಂತನೆ ನಡೆದಿದೆ ಎಂಬ ಎಂದು ತಿಳಿಸಿದರು.
ಸಿಎಂ, ಡಿಸಿಎಂ ಮತ್ತು ಕಂದಾಯ ಸಚಿವರಾದ ಕೃಷ್ಣಬೈರೇಗೌಡ ರೈತರ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಸಾವಯವ ಕೃಷಿಗೆ ಪ್ರೋತ್ಸಾಹ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ. ಆದರೆ ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರಸ್ತಾಪವಾಗಿರುವ ತಾಲೂಕಿನ 110 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 400 ಕೋಟಿ ಹಣ ಬೇಕಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಮನವಿ ಮಾಡಲಾಗಿದ್ದು, ಭರವಸೆ ಸಿಕ್ಕಿದೆ ಎಂದು ತಿಳಿಸಿದರು.
ರೈತ ಸಂಘಟನೆಗೆ ಅದರದೇ ಆದ ಶಕ್ತಿ ಇದೆ. ಪ್ರೊ.ಎಂಡಿಎನ್ ರ ಹೋರಾಟವನ್ನು ಮುಖ್ಯಮಂತ್ರಿಯವರು ಸ್ಮರಿಸುತ್ತಾರೆ. ಆದ್ದರಿಂದ ಅವರ ದಾರಿಯಲ್ಲಿ ಸಾಗಿ. ಅವರ ಆಶಯಕ್ಕೆ ವಿರುದ್ಧವಾಗಿ ಸ್ಥಾಪನೆಯಾಗಿರುವ ಎಂಎನ್ಸಿ ಕಂಪನಿಗಳ ಬಗ್ಗೆ ಜನರಿಗೆ ತಿಳಿಸಿಕೊಡಿ ಎಂದು ಸಲಹೆ ನೀಡಿದರು.
ರೈತ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ರೈತರು ನೆಮ್ಮದಿಯಿಂದ ಕೃಷಿಕಾರ್ಯದಲ್ಲಿ ತೊಡಗಲು ಬೇಕಾದ ಮೂಲ ಸೌಲಭ್ಯಗಳಿಗಾಗಿ 3 ದಶಕಗಳಿಂದ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ರೈತ ದೇಶದ ಬೆನ್ನೆಲುಬಾಗಿದ್ದು, ಚುನಾಯಿತ ಸರಕಾರಗಳು ಆದ್ಯತೆಯಲ್ಲಿ ನಮ್ಮ ಸಮಸ್ಯೆ ಬಗೆಹರಿಸಬೇಕು. ಭವಿಷ್ಯದಲ್ಲಿ ರಾಸಾಯಿನಿಕ ಕೃಷಿಯಿಂದ ಅಪಾಯಗಳಿದ್ದು, ಸಾವಯವ ಕೃಷಿ ಕಡೆಗೆ ರೈತರು ಗಮನ ಕೊಡಬೇಕು ಎಂದು ಮನವಿ ಮಾಡಿದರು.
ಇದಕ್ಕೂ ಮೊದಲು ರೈತ ನಾಯಕರಾದ ಪ್ರೊ .ಎಂ.ಡಿ.ಎನ್ ಮತ್ತು ಚೌದರಿ ಚರಣ್ ಸಿಂಗ್ರ ಭಾವಚಿತ್ರವನ್ನು ಅಲಂಕೃತ ಎತ್ತಿನಗಾಡಿಯಲ್ಲಿ ಇರಿಸಿ, ಮಂಗಳವಾದ್ಯ ಇತರೆ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಟಿ.ರಮೇಶ್ಬಾಬು, ಹುಲಿ ಯೋಜನೆ ನಿರ್ದೇಶಕ ಡಾ.ಪಿ.ರಮೇಶ್ಕುಮಾರ್, ರೈತ ಸಂಘಟನೆಗಳ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳಾದ ಮಾಡ್ರಹಳ್ಳಿ ಮಹದೇವಪ್ಪ, ಶಿವಪುರ ಮಹದೇವಪ್ಪ, ಕುಂದಕೆರೆ ಸಂಪತ್ತು, ಟಿ.ಎಸ್.ಶಾಂತಮಲ್ಲಪ್ಪ, ಕಂದೇಗಾಲದ ಹೊಸಹಳ್ಳಿ ಮಹೇಶ್, ಹಾಲಹಳ್ಳಿಮಹೇಶ್, ಕೃಷಿಕ ಸಮಾಜದ ರಾಜ್ಯ ಮತ್ತು ತಾಲೂಕು ಪ್ರತಿನಿಧಿಗಳಾದ ಕುಂದಕೆರೆ ನಾಗಮಲ್ಲಪ್ಪ, ಕೆ.ಎಂ.ಭೀಕ್ಷೇಶ್ ಪ್ರಸಾದ್, ಜಯಂತಿ, ಕಡಬೂರು ಮಂಜುನಾಥ್, ಹಂಗಳಮಾಧು, ಪಿಎಲ್ಡಿ ಬ್ಯಾಂಕ್ ಹಂಗಾಮಿ ಅಧ್ಯಕ್ಷ ಮಳವಳ್ಳಿ ಮಹೇಶ್, ದಡದಹಳ್ಳಿ ಮಹೇಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ್ ಸೇರಿದಂತೆ ಇತರರು ಹಾಜರಿದ್ದರು.