ಬೆಳಗಾವಿ: ಉತ್ತರ ಕರ್ನಾಟಕದ ಬಹುತೇಕ ರೈತರು ಕಬ್ಬು ಬೆಳೆಗಾರರಾಗಿದ್ದು, ಅವರಿಗೆ ಅನ್ಯಾಯವಾ ಗುತ್ತಿದೆ. ಕಬ್ಬಿನ ಕಾರ್ಖಾನೆಯ ಬಹುತೇಕ ಮಾಲೀಕರು ರಾಜಕಾರಣಿಗಳೇ ಆಗಿದ್ದಾರೆ. ಅವರಿಗೆ ಲಾಭ ಮಾಡುವುದೇ ಚಿಂತೆ. ರಾಜ್ಯದ ರೈತರ ಪರಿಸ್ಥಿತಿ ಅವರಿಗೆ ಬೇಕಿಲ್ಲ. ಹೀಗಾಗಿ ಕೂಡಲೇ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಸರಿಪಡಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ಅಥಣಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಿರುವ ಭ್ರಷ್ಟ ರಾಜಕಾರಣಿಗಳಿಗಾಗಿ ‘ಜನರು ರಾಜಕೀಯ ಬಿಟ್ಟು ತೊಲಗಿ’, ‘ಅಧಿಕಾರ ಬಿಟ್ಟು ತೊಲಗಿ’ ಎಂದು ಹೇಳುವ ಪರಿಸ್ಥಿತಿ ಬಂದಿದೆ. ಯೋಗ್ಯರನ್ನು ಆಯ್ಕೆ ಮಾಡುವ ಚಿಂತನೆ ನಮ್ಮದಾಗಬೇಕಿತ್ತು. ಎಎಪಿಯ ಯೋಜನೆಗಳನ್ನು ಕದ್ದು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ ಎಂದು ದೂರಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನ ವ್ಯರ್ಥವಾಗಿ ಸಾಗುತ್ತಿದೆ. ಬರಪೀಡಿತ ಪ್ರದೇಶಗಳಲ್ಲಿ ವೈಜ್ಞಾನಿಕ ಸಮೀಕ್ಷೆ ಯಾಗಬೇಕು. ಸರ್ವಪಕ್ಷಗಳ ನಿಯೋಗ ದೆಹಲಿಗೆ ತೆರಳಿ ತುರ್ತು ಪರಿಸ್ಥಿತಿಗೆ ಸ್ಪಂದಿಸುವಂತೆ ಕೇಂದ್ರಕ್ಕೆ ಒತ್ತಾಯಿಸಬೇಕು. ಬೆಳೆ ಹಾನಿ ಪರಿಹಾರ, ವಿಮೆಯ ತುರ್ತು ಪಾವತಿ, ಬರ ಪೀಡಿತ ಪ್ರದೇಶದ ರೈತರಿಗೆ 25 ಸಾವಿರ ರೂ. ನೀಡಬೇಕು, ಪಶುಸಂಗೋಪನೆಯಲ್ಲಿ ತೊಡಗಿರುವ ರೈತರಿಗೆ ಪ್ರತಿ ಜಾನುವಾರಿಗೆ 5 ಸಾವಿರ ರೂ. ಪರಿಹಾರ ನೀಡಬೇಕು.
ಬೆಲೆ ಏರಿಕೆ ನಿಯಂತ್ರಿಸಿ, ರೈತರ ಪ್ರತಿ ಕುಟುಂಬಕ್ಕೆ ಉಚಿತ ಪಡಿತರ ವಿತರಣೆ, ಮನ್ರೇಗಾ ಅಥವಾ ಇತರ ಯೋಜನೆಗಳ್ನು ಹಮ್ಮಿಕೊಂಡು ಗ್ರಾಮೀಣ ಭಾಗದ ಜನರಿಗೆ ಆದಾಯ ವ್ಯವಸ್ಥೆ ಕಲ್ಪಿಸಬೇಕು. ಸಾಂಕ್ರಾಮಿಕ ರೋಗ ಹರಡದಂತೆ ನೋಡಿಕೊಂಡು, ಸರ್ಕಾರಿ ಆಸ್ಪತ್ರೆ ವ್ಯವಸ್ಥೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ದೇಶವೊಂದು, ವ್ಯಕ್ತಿವೊಂದು, ಧರ್ಮವೊಂದು ಎನ್ನುವವರನ್ನು ಆಯ್ಕೆ ಮಾಡಿರುವುದು ನಮ್ಮದೇ ತಪ್ಪು. ದೆಹಲಿಯಲ್ಲಿ 8 ವರ್ಷಗಳಿಂದ ಅರವಿಂದ ಕೇಜ್ರಿವಾಲ್ ಭ್ರಷ್ಟಾಚಾರ ರಹಿತ ಸರ್ಕಾರ ನಡೆಸುತ್ತಿದ್ದಾರೆ. ಅಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆ, ಶಿಕ್ಷಣವನ್ನು ನೀಡಲಾಗುತ್ತಿದೆ. ಆದರೆ, ನಮ್ಮ ರಾಜ್ಯದಲ್ಲಿ ಆ ಕೆಲಸ ಆಗುತ್ತಿಲ್ಲ.
ಬಹುತೇಕ ಸಚಿವರು, ಶಾಸಕರೇ ಶಾಲೆಗಳನ್ನು ನಡೆಸುತ್ತಿದ್ದು, ಸರ್ಕಾರಿ ಶಾಲೆಗಳ್ನು ಮುಚ್ಚುತ್ತಿದ್ದಾರೆ. ಕುಟುಂಬ ರಾಜಕಾರಣವನ್ನು ನಿರ್ಮೂಲನೆ ಮಾಡಬೇಕೆಂದು ಪ್ರಧಾನಿ ಹೇಳಿದರು. ಆದರೆ, ಯಡಿಯೂರಪ್ಪ ಕುಟುಂಬದಲ್ಲಿ ಮೂವರು ಅಧಿಕಾರದಲ್ಲಿದ್ದಾರೆ. ಜೆಡಿಎಸ್ ಸ್ಥಿತಿಯು ಇದೇ ಆಗಿದೆ. ಕಾಂಗ್ರೆಸ್ನಲ್ಲೂ ಕುಟುಂಬ ರಾಜಕಾರಣವೇ ನಡೆಯುತ್ತಿದೆ ಎಂದು ಆರೋಪಿಸಿದರು.
ಕಬ್ಬು ಬೆಳೆಗಾರರ ಸಂಕಷ್ಟ ಆಲಿಸಿ: ಕಬ್ಬಿಗೆ 3,800 ರೂ. ಬೆಂಬಲ ಬೆಲೆ ನೀಡಬೇಕು. ಕಾರ್ಖಾನೆಗಳಲ್ಲಿ ತೂಕದಲ್ಲಿ ಮೋಸವಾಗುತ್ತಿದೆ. ಹೀಗಾಗಿ ಸರ್ಕಾರ ದಿಂದಲೇ ವೇಬ್ರಿಡ್ಜ್ ಸ್ಥಾಪಿಸಬೇಕು. ರೈತರನ್ನು ಶೋಷಣೆ ಮಾಡಲಾಗುತ್ತಿದೆ. ಕಬ್ಬು ಬೆಳೆಗಾರರ ಸಂಕ ಷ್ಟವನ್ನು ಸದನದಲ್ಲಿ ಚರ್ಚಿಸಬೇಕು. ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಹೊಸ ಜಿಲ್ಲೆಯನ್ನು ರಚಿಸಬೇಕಿದೆ. ಗಡಿ ವಿಚಾರದಲ್ಲಿ ಎಂಇಎಸ್ ತಗಾದೆ ತೆಗೆಯುತ್ತಲೇ ಇದೆ. ಎಲ್ಲಾ ಕ್ಷೇತ್ರದಲ್ಲೂ ಕನ್ನಡಕ್ಕೆ ಆದ್ಯತೆ ನೀಡುವಂತಾಗಬೇಕು. ಕನ್ನಡಿಗರಿಗೆ ಎಲ್ಲಾ ಕ್ಷೇತ್ರದ ಉದ್ಯೋಗಗಳಲ್ಲಿ ಆದ್ಯತೆ ನೀಡಬೇಕು ಎಂದರು.
ಬಜೆಟ್ನಲ್ಲಿ ಕನ್ನಡ ಭಾಷೆಗಾಗಿ ಕಡಿಮೆ ಹಣ ಮೀಸಲಿಡಲಾಗಿದೆ. ಗಡಿ ಅಭಿವೃದ್ಧಿ ಪ್ರಾಧಿಕಾರ ಕೆಲಸ ಮಾಡುತ್ತಿಲ್ಲ. ಅಸ್ತಿತ್ವದ ಉಳಿವಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ರಾಜಕೀಯದಲ್ಲಿ ತೊಡಗಿವೆ. ಈ ಸದನ ಮುಗಿಯುವುದರೊಳಗೆ ಗಡಿ ಭಾಗದ ಸಮಸ್ಯೆಗಳು, ಕನ್ನಡದ ವಿಚಾರ ಮತ್ತು ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಕುರಿತಾಗಿ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ತಗೆದುಕೊಳ್ಳಬೇಕು. ನಾಡಗೀತೆ, ನಾಡಧ್ವಜದ ಬಗ್ಗೆ ತೀರ್ಮಾನವಾಗಬೇಕು. ಅಥಣಿಯಲ್ಲಿ ಪ್ರಾಢಶಾಲೆಯೇ ಇಲ್ಲ ಎಂದರು.
ಜಾತಿಗಣತಿ ವರದಿ ಸ್ವೀಕಾರವಾಗಬೇಕು:
ಜಾತಿ ಗಣತಿಗೆ 2013ರಲ್ಲಿ ಅನುದಾನ ಬಿಡುಗಡೆಯಾಯಿತು. 180 ಕೋಟಿ ರೂ. ವ್ಯಯಿಸಿ ಜಾತಿಗಣತಿಯನ್ನು ಮುಗಿಸಲಾಯಿತು. ಆದರೆ, ಸಿದ್ದರಾಮಯ್ಯನವರೇ ವರದಿಯನ್ನು ಒಪ್ಪಿಕೊಳ್ಳಲಿಲ್ಲ. ನಂತರ ಬಂದ ಬಿಜೆಪಿ ಸರ್ಕಾರ, ಕುಮಾರಸ್ವಾಮಿಯವರು ವರದಿಯನ್ನು ಒಪ್ಪಿಕೊಳ್ಳಲಿಲ್ಲ. ಈಗ ಸಿದ್ದರಾಮಯ್ಯ ವರದಿಯನ್ನು ಸ್ವೀಕರಿಸಲು ಮತ್ತೆ ಹಿಂದೇಟು ಹಾಕುತ್ತಿದ್ದಾರೆ. ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುತ್ತಿದೆ. ಜಾತಿಗಣತಿ ರಾಷ್ಟ್ರದಲ್ಲೇ ಆಗಬೇಕು.
ಹೀಗಾಗಿ ಸಿದ್ದರಾಮಯ್ಯ ಅವರು ವರದಿಯನ್ನು ಸ್ವೀಕರಿಸಬೇಕು, ನಂತರ ಸದನದಲ್ಲಿ ಚರ್ಚೆಯಾಗಬೇಕು. ಮುಂದಿನ 15 ರಿಂದ 20 ದಿನಗಳಲ್ಲಿ ಜಾತಿಗಣತಿ ವರದಿಯನ್ನು ಸ್ವೀಕರಿಸದಿದ್ದರೆ ಎಎಪಿ ರಾಜ್ಯದಾದ್ಯಂತ ಹೋರಾಟ ನಡೆಸುತ್ತಿದೆ ಎಂದರು.
ರಾಜ್ಯ ಉಪಾಧ್ಯಕ್ಷರಾದ ಸಂಪತ್ ಕುಮಾರ್ ಶೆಟ್ಟಿ ಮಾತನಾಡಿ, ಕರ್ನಾಟಕದಲ್ಲೇ ಮೊಟ್ಟ ಮೊದಲ ಪುರಸಭೆಯಾಗಿದ್ದು ಅಥಣಿ ಪುರಸಭೆ. ಆದರೆ, ಹಲವು ವರ್ಷ ಕಳೆದರೂ ಇನ್ನೂ ಅದು ಪುರಸಭೆಯಾಗಿಯೇ ಉಳಿದಿದೆ.
ಈ ಬಗ್ಗೆ ಅಥಣಿ ಶಾಸಕರಾದ ಲಕ್ಷ್ಮಣ ಸವದಿ ಅವರು ಉತ್ತರ ನೀಡಬೇಕಿದೆ. 200 ಕೋಟಿ ರೂ. ಹೆಸ್ಕಾಂ ಹಗರಣ ಬೆಳಕಿಗೆ ಬಂತು. ಈ ಹಗರಣದಲ್ಲಿ 20ಕ್ಕೂ ಹೆಚ್ಚು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಆದರೆ, 21 ಅಧಿಕಾರಿಗಳಿಗೆ ಪ್ರಮೋಷನ್ ನೀಡಿ ಉನ್ನತ ಹುದ್ದೆ ನೀಡಲಾಗಿದೆ ಎಂದು ಆರೋಪಿಸಿದರು.
ಅಥಣಿಯನ್ನು ಜಿಲ್ಲೆಯನ್ನಾಗಿ ಮಾಡುವಲ್ಲಿ ಪಕ್ಷಾತೀತವಾಗಿ ನಾವೆಲ್ಲರೂ ಕೈಜೋಡಿಸಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಬೆಳಗಾವಿಯನ್ನು ವಿಭಜನೆ ಮಾಡಿ ಚಿಕ್ಕೋಡಿ ಮತ್ತು ಗೋಕಾಕ ಅನ್ನು ಜಿಲ್ಲೆಯನ್ನಾಗಿ ಮಾಡುವುದಾಗಿ ಹೇಳಿದ್ದಾರೆ. ಆದರೆ, ಯಾವ ಆಧಾರದ ಮೇಲೆ ಚಿಕ್ಕೋಡಿ ಮತ್ತು ಗೋಕಾಕನ್ನು ಪರಿಗಣಿಸಲಾಗಿದೆ ಎಂಬುದನ್ನು ತಿಳಿಸಬೇಕು. ಅಥಣಿಯನ್ನು ಜಿಲ್ಲೆಯನ್ನಾಗಿ ಮಾಡಲು ಎಲ್ಲರೂ ಸಹಕರಿಸಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರ್ಜುನ್ ಹಲಗಿ ಗೌಡ, ರಾಜ್ಯ ಕಾರ್ಯದರ್ಶಿಗಳಾದ ಬಸವರಾಜ ಮುದಿಗೌಡರ್, ರವಿಕುಮಾರ್, ಸಾಮಾಜಿಕ ಜಾಲತಾಣದ ರಾಜ್ಯ ಮುಖ್ಯಸ್ಥ ದರ್ಶನ್ ಜೈನ್ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿ ಅಫಾನ್ ಮಾಸ್ಟರ್, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಶಂಕರ್ ಹೆಗಡೆ, ರಾಜ್ಯ ಹಿಂದುಳಿದ ವರ್ಗದ ಘಟಕದ ಅಧ್ಯಕ್ಷರಾದ ನವೀನ್ ಚಂದ್ರ ಪೂಜಾರಿ ಮುಂದಾದವರು ಇದ್ದರು.