ಬೆಂಗಳೂರು: ಮೀನುಗಾರರ ಸಮುದಾಯದ ಗಂಗಾಮತ, ಬೆಸ್ತ, ಮೊಗವೀರ, ಕೋಲಿ, ಕಬ್ಬಲಿಗ ,ಅಂಬಿಗ ಸಮುದಾಯಕ್ಕೆ ಸೇರಿದ ಹಿರಿಯ ಮುಖಂಡ ಪ್ರಮೋದ್ ಮಧ್ವರಾಜ್ ರವರಿಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಕರ್ನಾಟಕ ಗಂಗ ಮತಸ್ಥರ ಸಂಘ ಬಿಜೆಪಿಯನ್ನು ಆಗ್ರಹಿಸಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಡಾ. ಬಿ. ಮೌಲಾಲಿ, ಪ್ರಧಾನ ಕಾರ್ಯದರ್ಶಿ ಸಿ. ಮುರಳೀಧರ್, ಮೀನುಗಾರ ಸಮುದಾಯ 39 ಪರ್ಯಾಯ ಪದಗಳಿಂದ ರಾಜ್ಯದಲ್ಲಿ ಗುರುತಿಸಿಕೊಂಡಿದ್ದು, 60 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹೊಂದಿದೆ. ಪ್ರಮೋದ್ ಮಧ್ವರಾಜ್ ಅವರು ಮೀನುಗಾರರ ಹಾಗೂ ಹಿಂದುಳಿದ ವರ್ಗದ ಸಮುದಾಯದ ಸರ್ವತೋಮುಖ ಅಭಿವೃದ್ಧಿ ಮತ್ತು ವಿಕಾಸವನ್ನು ಧ್ಯೇಯವಾಗಿಟ್ಟುಕೊಂಡು ಯುವಜನರನ್ನು ಸಂಘಟಿಸುವ ಯುವ ಪೀಳಿಗೆಯಲ್ಲಿ ನಾಯಕತ್ವ ರೂಪಿಸುವ ಕೆಲಸ ಮಾಡುತ್ತಿದ್ದಾರೆ.
ಪ್ರಾಮಾಣಿಕತೆ, ಪಾರದರ್ಶಕತೆ, ಬದ್ಧತೆ ಪರಿಶ್ರಮ ಸಮರ್ಪಣಾ ಮನೋಭಾವದಿಂದ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೃಜನಶೀಲ ಮನಸ್ಸಿನ ಪ್ರಮೋದ್ ಮಧ್ವರಾಜ್ ಮೀನುಗಾರರ ಶೈಕ್ಷಣಿಕ ಸಾಮಾಜಿಕ ಆರ್ಥಿಕ ಸಾಂಸ್ಕೃತಿಕ ರಾಜಕೀಯ ಪ್ರಜ್ಞೆಗಳ ಉನ್ನತೀಕರಣ ಸಬಲೀಕರಣ ಮತ್ತು ಅಭಿವೃದ್ಧಿಗಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯದ ಸಮಾಜದ ಬಂಧುಗಳು ರಾಜ್ಯದ ಸಂಘದ ಪ್ರಮುಖರಿಗೂ ಹಾಗೂ ಬಾಜಾಪದ ರಾಜ್ಯ ನಾಯಕರಿಗೂ ಹಾಗೂ ರಾಷ್ಟ್ರ ನಾಯಕರ ಗಮನಕ್ಕೂ ಮನವಿ ನೀಡಿ ಹಕ್ಕೋತ್ತಾಯ ಮಾಡಿರುವುದನ್ನು ಈ ಸಂದರ್ಭದಲ್ಲಿ ತಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇವೆ. ಹಾಗಾಗಿ ನಮ್ಮ ಸಮಾಜಕ್ಕೆ ರಾಜಕೀಯ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಪಕ್ಷದವರು ಪರಿಗಣಿಸಿ ಪ್ರಮೋದ್ ಮಧ್ವರಾಜ್ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟು ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ಹೇಳಿದರು.