ಬೆಂಗಳೂರು: ಪ್ರಜ್ವಲ್ ರೇವಣ್ಣಗೆ ಟಿಕೆಟ್ ಕೊಡಬೇಡಿ ಅಂತ ಮೊದಲೇ ಹೇಳಿದ್ದೆ. ಅವರಿಂದ ಹೆಣ್ಣು ಮಕ್ಕಳ ಶೋಷಣೆ ಆಗಿದೆ. ಅದನ್ನ ನೋಡಿದ್ದೀನಿ. ಮುಂದೊಂದು ದಿನ ಸಮಸ್ಯೆಯಲ್ಲಿ ಸಿಲುಕಿ ಮುಜುಗರಕ್ಕೆ ಸಿಲುಕುತ್ತೇವೆ ಎಂದಿದ್ದೆ ಅಂತಾ ಬಿಜೆಪಿ ಮುಖಂಡ ಮತ್ತು ವಕೀಲ ದೇವರಾಜೇ ಗೌಡ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಬೇಡಿ ಎಂದು ಪತ್ರ ಬರೆದಿದ್ದೆ. ನಮ್ಮ ನಾಯಕರು ಅದನ್ನು ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ. ಅವರ ಗಮನಕ್ಕೆ ತರಲು ಸಾಕಷ್ಟು ಪ್ರಯತ್ನಗಳನ್ನು ನಾನು ಮಾಡಿದ್ದೇನೆ. ಇ-ಮೇಲ್ ಮೂಲಕ ಅವರಿಗೆ ಮಾಹಿತಿ ನೀಡಲು ಪ್ರಯತ್ನವನ್ನು ಮಾಡಿದ್ದೀನಿ ಎಂದರು.
ವಿಜಯೇಂದ್ರ ಅವರಿಗೂ ವಾಟ್ಸಾಪ್ ಮೂಲಕ ಮಾಹಿತಿ ನೀಡಿದ್ದೆ. ಅವರು ಬ್ಯುಸಿಯಲ್ಲಿ ಇದನ್ನ ಗಮನಿಸಿದ್ರಾ..? ಇಲ್ಲವಾ..? ಗೊತ್ತಿಲ್ಲ. ಅಷ್ಟರೊಳಗೆ ಪಕ್ಷದ ವರಿಷ್ಠರು ತೀರ್ಮಾನಕ್ಕೆ ಬಂದು ಟಿಕೆಟ್ ನೀಡಿದ್ರು. ಎಸ್ಐಟಿ ತನಿಖೆ ಮಾಡೋವಾಗ ಪೆನ್ ಡ್ರೈವ್ ಎಲ್ಲಿಂದ ಬಂತು. ಇದನ್ನು ಯಾರು ಬಿಸಾಡಿದ್ರು..? ಅದರ ಬಗ್ಗೆ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ನನ್ನ ಬಳಿಯೂ ವೀಡಿಯೋಗಳು ಇದ್ದಾವೆ. ಅದನ್ನು ವೈರಲ್ ಮಾಡಬೇಕು ಅಂದಿದ್ರೆ ಯಾವಾಗಲೋ ಮಾಡಬಹುದಿತ್ತು.ಅಥವಾ ಎಲೆಕ್ಷನ್ ಪಿಟಿಷನ್ ಟೈಂ ಅಲ್ಲಿ ಕೋರ್ಟ್ ಗಮನಕ್ಕೆ ತರಬಹುದಿತ್ತು. ಈ ವೀಡಿಯೋ ಇರೋದ್ರಿಂದ ಪ್ರಜ್ವಲ್ ಗೆ ಟಿಕೆಟ್ ಕೊಡಬೇಡಿ ಅಂತ ವಿರೋಧಿಸಿದ್ದೆ. ರಾಜ್ಯ, ರಾಷ್ಟ್ರದ ಬಿಜೆಪಿ ನಾಯಕರಿಗೂ ಮಾಹಿತಿಯನ್ನು ನೀಡಿದ್ದೆ.
ನಾನೇ ವೀಡಿಯೋ ರಿಲೀಸ್ ಮಾಡಬೇಕು ಅಂದಿದ್ರೆ ಟಿಕೆಟ್ ನೀಡುವ ಮೊದಲೇ ಲೀಕ್ ಮಾಡಬಹುದಿತ್ತು. ಟಿಕೆಟ್ ಅನ್ನು ಅವಾಗಲೇ ತಪ್ಪಿಸೋದು ಸುಲಭ ಇತ್ತು. ಚುನಾವಣೆ ಒಂದು ವಾರ ಇದೆ ಅಂದಾಗ ಹೀಗೆ ಮಾಡಿದ್ದು ತಪ್ಪು. ಎಸ್ಐಟಿ ಅಲ್ಲ ಸಿಬಿಐಯಿಂದ ಈ ಪ್ರಕರಣದ ತನಿಖೆ ಆಗಬೇಕು ಎಂದು ದೇವರಾಜೇ ಗೌಡ ಆಗ್ರಹಿಸಿದರು.