This is the title of the web page
This is the title of the web page

ಬೆಂಗಳೂರು ಅಭಿವೃದ್ಧಿ ನನ್ನ ಉದ್ದೇಶ: ಡಿಸಿಎಂ ಡಿಕೆಶಿ

ಬೆಂಗಳೂರು: ಬೆಂಗಳೂರನ್ನು ಅಭಿವೃದ್ಧಿ ಮಾಡಬೇಕು ಅನ್ನೋದು ನನ್ನ ಉದ್ದೇಶ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.ಬೆಂಗಳೂರಿನ ಬ್ಯಾಟರಾಯನಪುರದ ರಾಚೇನಹಳ್ಳಿ ಕೆರೆ ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು.

ಬೆಂಗಳೂರಿನ ಎಷ್ಟು ರಸ್ತೆಗಳಲ್ಲಿ ಮರಗಳಿಲ್ಲ ಎಂದು ಬಿಬಿಎಂಪಿ ತಕ್ಷಣ ವರದಿ ಸಿದ್ದಪಡಿಸಬೇಕು. ಆ ರಸ್ತೆಗಳಲ್ಲಿ ಸ್ಥಳೀಯ ಶಾಲಾ ಮಕ್ಕಳಿಂದ ಗಿಡ ನೆಡಿಸಿ, ಆ ಗಿಡವನ್ನು ಬೆಳೆಸುವ ಜವಾಬ್ದಾರಿಯನ್ನು ಆ ಮಕ್ಕಳಿಗೇ ನೀಡಬೇಕು. ಇದಕ್ಕೆ ಬೇಕಾದ ಸಸಿಗಳು, ರಕ್ಷಾ ಪಂಜರಗಳನ್ನು ಪಾಲಿಕೆ ನೀಡಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಆ ಗಿಡಕ್ಕೆ ಆ ಮಕ್ಕಳ ಹೆಸರು ಹಾಕಿಕೊಳ್ಳಲು ಅವಕಾಶ ನೀಡಬೇಕು. ಆ ಗಿಡವನ್ನು ಆ ಮಗು ಬೆಳೆಸಬೇಕು. ಈ ವಿಚಾರದಲ್ಲಿ ಮಕ್ಕಳಲ್ಲಿ ಸ್ಪರ್ಧೆ ಏರ್ಪಡಿಸಿ. ಆಗ ಮಕ್ಕಳು ಸಂತೋಷದಿಂದ, ಬಹಳ ಕಾಳಜಿಯಿಂದ ಗಿಡ, ಮರ ಬೆಳೆಸಲು ಆಸಕ್ತಿ ತೋರುತ್ತಾರೆ. ನಾವು ಮಕ್ಕಳನ್ನು ಸಾಕುವಂತೆ ಮರಗಿಡಗಳನ್ನು ಬೆಳೆಸಬೇಕು.ಆಗ ಪರಿಸರ ದಿನಕ್ಕೆ ಅರ್ಥ ಬರುತ್ತದೆ.

ಮುಂದಿನ ಒಂದು ತಿಂಗಳಲ್ಲಿ ಈ ಬಗ್ಗೆ ಒಂದು ಪರಿಪೂರ್ಣ ಯೋಜನೆ ರೂಪಿಸಬೇಕು.ಬೆಂಗಳೂರು ನಗರ ಅಭಿವೃದ್ಧಿ ಖಾತೆಯನ್ನೂ ಹೊಂದಿರುವ ನಾನು ಪಾಲಿಕೆ ಅಧಿಕಾರಿಗಳಿಗೆ ನೀಡುತ್ತಿರುವ ಮೊದಲನೆಯ ಟಾಸ್ಕ್ ಇದು. ಮನುಷ್ಯನ ಬದುಕು ಪರಿಸರದ ಜತೆಗೆ ಬೆಸೆದುಕೊಂಡಿದೆ. ಮನುಷ್ಯ ತನ್ನ ಬದುಕಿನ ಪ್ರತಿ ಹಂತದಲ್ಲಿ ಪರಿಸರವನ್ನು ಉಳಿಸಿಕೊಂಡರೆ ಮಾತ್ರ ಆರೋಗ್ಯಕರ ಜೀವನ ನಡೆಸಬಹುದು. ವಿಶ್ವ ಪರಿಸರ ದಿನ ಕೇವಲ ಸಂಕೇತ ಮಾತ್ರ. ನಾವು ಪ್ರತಿನಿತ್ಯ ಪರಿಸರ ಸಂರಕ್ಷಣೆ ಮಾಡಬೇಕು. ಆಗ ಮಾತ್ರ ಪರಿಸರಕ್ಕೆ ಶಕ್ತಿ ತುಂಬಲು ಸಾಧ್ಯ ಎಂದರು.

ನಾವು ಹಸಿರನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಬದಲಾದ ಜೀವನಶೈಲಿಯಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಪ್ಲಾಸ್ಟಿಕ್ ಹಸಿರನ್ನು ನಮ್ಮ ಮನೆಗಳಲ್ಲಿ ಹಾಕಿಕೊಂಡು ಸಂತೋಷಪಡುವಂತಾಗಿದೆ. ಹೀಗಾಗಿ ಪರಿಸರ ಸಂರಕ್ಷಣೆ ವಿಚಾರದಲ್ಲಿ ಅರಣ್ಯ ಇಲಾಖೆ, ಪಾಲಿಕೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಶಾಶ್ವತವಾದ ಯೋಜನೆಗಳ ಬಗ್ಗೆ ಗಮನ ಹರಿಸಬೇಕು.

ಪ್ರತಿನಿತ್ಯ ಪರಿಸರ ಸಂರಕ್ಷಣೆ ಬಗ್ಗೆ ಗಮನಹರಿಸುವಂತೆ ಯೋಜನೆ ರೂಪಿಸಬೇಕು. ಇದು ಒಂದು ದಿನದ ಕೆಲಸವಲ್ಲ.ನೀವು ಊಟಕ್ಕೆ ಮೀನು ಕೊಟ್ಟರೆ ಅದು ಒಂದು ಹೊತ್ತಿನ ಹೊಟ್ಟೆ ತುಂಬಿಸಲು ಸೀಮಿತವಾಗುತ್ತದೆ. ಅದೇ ನೀವು ಮೀನುಗಾರಿಕೆ ಕೌಶಲ್ಯ ಕಲಿಸಿದರೆ ಅದು ಜೀವನಪೂರ್ತಿ ನೆರವಾಗುತ್ತದೆ. ಹೀಗಾಗಿ ಅಧಿಕಾರಿಗಳು ಜೀವನಪೂರ್ತಿ ಪ್ರಯೋಜನವಾಗುವಂತಹ ಯೋಜನೆಗಳನ್ನು ಸಮಾಜಕ್ಕೆ ರೂಪಿಸಬೇಕು. ಪರಿಸರ ಹೇಗೆ ಬಳಸಿಕೊಳ್ಳಬೇಕು, ಹೇಗೆ ಸಂರಕ್ಷಿಸಿಕೊಳ್ಳಬೇಕು ಎಂದು ಮಕ್ಕಳಿಗೆ ತರಬೇತಿ, ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ಈ ವಿಚಾರವಾಗಿ ಅಧಿಕಾರಿಗಳು ಆಳ ಆಲೋಚನೆ ಮಾಡಬೇಕು. ನಮ್ಮ ಬೇರು ಗಟ್ಟಿಯಾಗಿದ್ದಷ್ಟು ನಾವು ಆರೋಗ್ಯಕರವಾಗಿರುತ್ತೇವೆ. ಉದ್ಯಾನವನಗಳಲ್ಲಿ ಮರಗಳನ್ನು ಬೆಳೆಸುವುದರಲ್ಲಿ ಅರ್ಥವಿಲ್ಲ. ಉದ್ಯಾನವನಗಳು ಉದ್ಯಾನವನಗಳ ರೀತಿ ಇರಲಿ. ಉದ್ಯಾನವನಗಳಲ್ಲಿ ಅರಣ್ಯ ನಿರ್ಮಿಸುವುದು ಬೇಡ. ಎಲ್ಲಿ ಮರಗಳು ಇಲ್ಲವೋ ಅಲ್ಲಿ ಗಿಡ ನೆಡುಬೇಕು.

ಪರಿಸರ ಸಂರಕ್ಷಣೆ ದೀರ್ಘಕಾಲದ ಯೋಜನೆ ಬೇಕು. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು 5 ಕೋಟಿ ಗಿಡ ನೆಡುವ ಕಾರ್ಯಕ್ರಮ ಮಾಡಿದ್ದರು. ಅದರಲ್ಲಿ 1 ಕೋಟಿ ಮರಗಳಾದರೂ ಉಳಿದುಕೊಂಡಿವೆ. ಎಲ್ಲಿ ಹಸಿರು ಇಲ್ಲವೋ ಅಲ್ಲಿ ಗಿಡಮರಗಳನ್ನು ಬೆಳೆಸಲು ಗಮನ ಹರಿಸಬೇಕು. ಬೆಂಗಳೂರು ತನ್ನ ಹಸಿರು ಪರಿಸರದಿಂದ ಹೆಸರು ಮಾಡಿದೆ. ಹೀಗಾಗಿ ಬೆಂಗಳೂರಿನಲ್ಲಿ ಹಸಿರಿನ ಪ್ರಮಾಣ ಹೆಚ್ಚಿಸಲು ಸೂಕ್ತ ಯೋಜನೆ ರೂಪಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸಚಿವ ಕೃಷ್ಣ ಬೈರೇಗೌಡ, ಶಾಸಕ ಎ ಸಿ ಶ್ರೀನಿವಾಸ್, ಎಂಎಲ್ಸಿ ನಾಗರಾಜ್ ಯಾದವ್, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಮತ್ತಿತರರು ಭಾಗವಹಿಸಿದ್ದರು.