This is the title of the web page
This is the title of the web page

ಚಿಕ್ಕಬಳ್ಳಾಪುರದಲ್ಲಿ ಪಾರಂಪರಿಕ ಕೇಂದ್ರವಾಗಿ ನಂದಿ ನಿಲ್ದಾಣ ಅಭಿವೃದ್ಧಿ ಶತಮಾನದ ರೈಲ್ವೇ ನಿಲ್ದಾಣಕ್ಕೆ ಸಿಕ್ಕಿತು ಕಾಯಕಲ್ಪ

ಚಿಕ್ಕಬಳ್ಳಾಪುರ: ಶತಮಾನಗಳ ಇತಿಹಾಸವನ್ನು ಹೊಂದಿರುವ ತಾಲ್ಲೂಕಿನ ನಂದಿ ರೈಲ್ವೇ ನಿಲ್ದಾಣಕ್ಕೆ ರೈಲ್ವೇ ಇಲಾಖೆ ಕಾಯಕಲ್ಪ ನೀಡಲು ಮುಂದಾಗಿದ್ದು, ಪಾರಂಪರಿಕ ಕೇಂದ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ.

ಚಿಕ್ಕಬಳ್ಳಾಪುರ ಕೋಲಾರ ರೈಲ್ವೇ ಮಾರ್ಗ ಮೈಸೂರು ಸಂಸ್ಥಾನದ ಮೊದಲ ರೈಲ್ವೇ ಮಾರ್ಗವಾಗಿದೆ. 1915ರಲ್ಲಿ ಈ ಮಾರ್ಗಕ್ಕೆ ಚಾಲನೆ ನೀಡಲಾಗಿತ್ತು. 2 ದಶಕದಿಂದೀಚೆಗೆ ಹಂತ ಹಂತವಾಗಿ ಬ್ರಾಡ್ಗೇಜ್ ಮಾರ್ಗವಾಗಿ ಮಾರ್ಪಟ್ಟಿದೆ. ಈ ಮಾರ್ಗದಲ್ಲಿ ಬರುವ ರೈಲ್ವೇ ನಿಲ್ದಾಣಗಳು ಶತಮಾನದ ಇತಿಹಾಸವನ್ನು ಹೊಂದಿವೆ.

ಆದ್ದರಿಂದ ಅವುಗಳನ್ನು ಜೀರ್ಣೋದ್ಧಾರಗೊಳಿಸಿ ಪಾರಂಪರಿಕ ತಾಣಗಳಾಗಿ ಉಳಿಸಿಕೊಳ್ಳಬೇಕು ಎಂಬುದು ರೈಲ್ವೇ ಇಲಾಖೆ ಉದ್ದೇಶವಾಗಿದೆ. ಈಗಾಗಲೆ ಸರಕಾರೇತರ ಸಂಸ್ಥೆಯ ಸಹಯೋಗದಲ್ಲಿ ದೊಡ್ಡಜಾಲ, ದೇವನಹಳ್ಳಿ ಹಾಗೂ ಆವತಿ ನಿಲ್ದಾಣಗಳನ್ನು ಜೀರ್ಣೋದ್ಧಾರಗೊಳಿಸಲಾಗಿದೆ.

ನಂದಿಯಲ್ಲಿ ರೈಲ್ವೇ ಮ್ಯೂಸಿಯಂ: ಪ್ರವಾಸೋದ್ಯಮವನ್ನು ದೃಷ್ಠಿಯಲ್ಲಿರಿಸಿಕೊಂಡು ನಂದಿ ಬೆಟ್ಟಕ್ಕೆ ಈಗಾಗಲೆ ರಾಜ್ಯ ಸರ್ಕಾರ ರೋಪ್ ವೇ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದೆ. ಬೆಟ್ಟದ ತಪ್ಪಲಿನಲ್ಲಿರುವ ನಂದಿ ರೈಲ್ವೇ ನಿಲ್ದಾಣವನ್ನುಕೂಡ ಪ್ರವಾಸಿಗರನ್ನು ಆಕರ್ಷಿಸುವಂತೆ ಅಭಿವೃದ್ಧಿಪಡಿಸುವುದು ರೈಲ್ವೇ ಇಲಾಖೆ ಉದ್ದೇಶವಾಗಿದೆ. ಮೊದಲ ಹಂತವಾಗಿ ಮುಖ್ಯ ರಸ್ತೆಯಿಂದ ರೈಲ್ವೇ ನಿಲ್ದಾಣದವರೆಗೆ ಸಿಮೆಂಟ್ ಕಾಂಕ್ರಿಟ್ ರಸ್ತೆ ಮಾಡಲಾಗಿದೆ.

ಮುಂದಿನ ಹಂತದಲ್ಲಿ ಕೋಟ್ಯಾಂತರ ರೂ. ವೆಚ್ಚದಲ್ಲಿ ರೈಲ್ವೇ ಮ್ಯೂಸಿಯಂ, ಚಿತ್ರಪಟ ಗ್ಯಾಲರಿ, ಮಕ್ಕಳ ರೈಲು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಜೀರ್ಣೋದ್ಧಾರಕ್ಕೆ ಭೂಮಿ ಪೂಜೆ: ಪ್ರಕೃತಿಯ ಸೌಂದರ್ಯದ ಮಡಿಲಲ್ಲಿರುವ ನಂದಿ ರೈಲ್ವೇ ನಿಲ್ದಾಣವನ್ನು ಈ ಮಾರ್ಗದ ಪ್ರಮುಖ ಪಾರಂಪರಿಕ ತಾಣವೆಂದು ಗುರುತಿಸಲಾಗಿದೆ. ನಿಲ್ದಾಣದ ಕಟ್ಟಡದ ಹಳೆಯ ಸ್ವರೂಪಕ್ಕೆ ಧಕ್ಕೆ ಬಾರದಂತೆ ಯತಾಸ್ಥಿತಿ ಕಾಪಾಡಿಕೊಂಡು ಜೀರ್ಣೋದ್ಧಾರಗೊಳಿಸಲು ಸರಕಾರೇತರ ಇಂಟ್ಯಾಕ್ ಸಂಸ್ಥೆ ಕೈಜೋಡಿಸಿದೆ.

ಈ ಹಿನ್ನಲೆಯಲ್ಲಿ ಶುಕ್ರವಾರ ಬೆಂಗಳೂರು ವಿಭಾಗದ ಆಡಳಿತ ವಿಭಾಗದ ಹೆಚ್ಚುವರಿ ರೈಲ್ವೇ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್ ಜೀರ್ಣೋದ್ಧಾರ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಇಂಟ್ಯಾಕ್ ಸಂಸ್ಥೆಯ ಸಂಚಾಲಕಿ ಮೀರಾ ಅಯ್ಯರ್, ಸಹ ಸಂಚಾಲಕ ಅರವಿಂದ್, ಚೇತನಾ ಮತ್ತಿತರರು
ಹಾಜರಿದ್ದರು.