ಪೀಣ್ಯ ದಾಸರಹಳ್ಳಿ: ’ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ತೀರಾ ಹದಗೆಟ್ಟ ರಾಜಕಾಲುವೆಗಳ ಸ್ವಚ್ಛತೆ, ತಡೆಗೋಡೆ ನಿರ್ಮಾಣ, ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅಧಿಕಾರಿಗಳೊಂದಿಗೆ ಎಲ್ಲಾ ಕಡೆ ಹೋಗಿ ಎಲ್ಲೆಲ್ಲಿ ಜರೂರಾಗಿ ಕೆಲಸ ಆಗಬೇಕು. ಎಲ್ಲೆಲ್ಲಿ ಬಾಕಿ ಇದೆ ಎಂದು ಪರಿಶೀಲಿಸುತ್ತಿದ್ದೇವೆ’ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.
ಶೆಟ್ಟಿಹಳ್ಳಿ ವ್ಯಾಪ್ತಿಯ ಎನ್.ಆರ್.ಆರ್ ಕಾಲೇಜ್ ಹತ್ತಿರ, ಕಮ್ಮಗೊಂಡನಹಳ್ಳಿಯಲ್ಲಿ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.‘ಹಲವು ಭಾಗಗಳಲ್ಲಿ ಚರಂಡಿ ಮತ್ತು ರಾಜಕಾಲುವೆಗಳಲ್ಲಿ ಗಿಡಗಳು ಬೆಳೆದು ನೀರು ಸರಾಗವಾಗಿ ಹರಿಯಲು ಜಾಗವಿಲ್ಲದೆ ದುರ್ನಾತ ಬೀರುತ್ತಿತ್ತು. ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಅನೇಕ ಮರಣಾಂತಿಕ ಮತ್ತು ಸಾಂಕ್ರಾಮಿಕ ಖಾಯಿಲೆಗಳು ಹರಡುತ್ತವೆ. ಆದ್ದರಿಂದ ಅಂತಹ ಚರಂಡಿ ಮತ್ತು ರಾಜಕಾಲುವೆ ದುರಸ್ತಿ ಕಾರ್ಯ ಅಚ್ಚುಕಟ್ಟಾಗಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.
‘ಮಳೆಗಾಲದಲ್ಲಿ ರಾಜ ಕಾಲುವೆಗಳಲ್ಲಿ ನೀರು ಹರಿಯದೆ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿ ಜಲಾವೃತ ಆಗುವ ಸಂಭವವಿತ್ತು ಅಂತಹ ರಾಜ ಕಾಲುವೆಗಳ ದುರಸ್ತಿ ಕಾರ್ಯ ಮಾಡಲಾಗುತ್ತಿದೆ’ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ದಾಸರಹಳ್ಳಿ ಮಂಡಲ ಅಧ್ಯಕ್ಷ ಸೋಮಶೇಖರ್, ಹನಶ್ರೀ ಮಂಜುನಾಥ್, ರಮೇಶ್ ಯಾದವ್, ಜಬ್ಬಾರ್ ಗುತ್ತಿಗೆದಾರರು, ಸ್ಥಳೀಯರು ಮುಂತಾದವರಿದ್ದರು.