ಬೆಂಗಳೂರು: ಇವತ್ತು 2024 ಜನವರಿ 1 ಹೊಸ ವರ್ಷ ಆರಂಭದ ಮೊದಲನೇ ದಿನ. ಇದು ವಾರದ ಆರಂಭವೂ ಹೌದು. ಈ ದಿನವನ್ನು ದೇವರ ಆಶೀರ್ವಾದದಿಂದ ಆರಂಭಿಸಲು ಜನ ಬಯಸುತ್ತಾರೆ. ಹೀಗಾಗಿ ಇಂದು ಬೆಂಗಳೂರಿನ ಹಲವು ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡುಬಂದಿದೆ.
ಬೆಂಗಳೂರಿನ ಹಲವಾರು ಪ್ರಸಿದ್ಧ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಸಾಗರೋಪಾದಿಯಲ್ಲಿ ಜನ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ಮಲ್ಲೇಶ್ವರಂನಲ್ಲಿರುವ ಕಾಡು ಮಲ್ಲೇಶ್ವರ ದೇವಸ್ಥಾನ, ಇಸ್ಕಾನ್ ಟೆಂಪಲ್, ಶಿವೋಹಂ ಶಿವ ದೇವಾಲಯ, ಸೋಮೇಶ್ವರ ದೇವಸ್ಥಾನ ಸೇರಿದಂತೆ ನಾನಾ ದೇವಸ್ಥಾನಗಳಿಗೆ ಜನ ಭೇಟಿ ನೀಡುತ್ತಿದ್ದಾರೆ.
ಚೊಕ್ಕನಾಥಸ್ವಾಮಿ ದೇವಾಲಯ, ನಂದಿ ದೇವಾಲಯ, ಬನಶಂಕರಿ ಅಮ್ಮನ ದೇವಸ್ಥಾನ, ಹುಳಿಮಾವು ಗುಹಾ ದೇವಾಲಯ, ಕೋಟೆ ವೆಂಕಟರಮಣ ದೇವಸ್ಥಾನ, ಶೃಂಗಗಿರಿ ಷಣ್ಮುಖ ದೇವಸ್ಥಾನ, ಗವಿ ಗಂಗಾಧರೇಶ್ವರ ದೇವಸ್ಥಾನ ಹೀಗೆ ನಗರದ ಪ್ರಸಿದ್ಧ ದೇವಸ್ಥಾನಗಳಿಗೆ ಭಕ್ತರು ಬೆಳಗಿನ ಪೂಜೆಯಲ್ಲಿ ಭಾಗವಹಿಸಿ ದೇವರ ಆಶೀರ್ವಾದದೊಂದಿಗೆ ಹೊಸ ವರ್ಷವನ್ನು ಆರಂಭಿಸುತ್ತಿದ್ದಾರೆ.
ಜೊತೆಗೆ ನಗರದ ರಾಗಿಗುಡ್ಡ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ, ಬಿಗ್ ಬುಲ್ ಟೆಂಪಲ್ ಮತ್ತು ಗಣೇಶ್ ಟೆಂಪಲ್, ಅಭಯ ಆಂಜನೇಯ ದೇವಸ್ಥಾನ, ಗಾಳಿ ಆಜನೇಯ ದೇವಸ್ಥಾನಗಳಲ್ಲೂ ಭಕ್ತರು ನೂರಾರು ಸಂಖ್ಯೆಯಲ್ಲಿ ನೆರೆದಿರುವುದು ಕಂಡು ಬಂದಿದೆ.
ಇಂದು ಹೊಸ ವರ್ಷದ ಆರಂಭದ ಹಿನ್ನೆಲೆಯಲ್ಲಿ ಹಲವಾರು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.
ಭಾನುವಾರವೇ ದೇವಸ್ಥಾನಗಳಲ್ಲಿ ಶುಚಿ ಕಾರ್ಯವನ್ನು ಪೂರ್ಣಗೊಳಿಸಲಾಗಿದ್ದು, ಇಂದು ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ಅರಂಭವಾಗಿವೆ. ಜನರು ತಂಡೋಪತಂಡವಾಗಿ ದೇವಸ್ಥಾನಗಳಿಗೆ ಭೇಟಿ ನೀಡಿ ತಮ್ಮ ಕೋರಿಕೆಯೊಂದಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಕೆಲವರು ವಿಶೇಷ ಪೂಜೆ ಮಾತ್ರವಲ್ಲದೆ ಅನ್ನದಾನ, ಬಟ್ಟೆ ಹಾಗೂ ದವಸಧಾನ್ಯಗಳನ್ನು ನೀಡಿರುವುದಾಗಿ ತಿಳಿದುಬಂದಿದೆ.