ಎ ಕ್ಯೂಬ್ ಫಿಲ್ಮ್ಸ್ ನಿರ್ಮಾಣದಲ್ಲಿ, ಸುಧೀರ್ ಶಾನುಭೋಗ್ ನಿರ್ದೇಶಿಸುತ್ತಿರುವ ಚಿತ್ರ ಧರಣಿ. ಅಪ್ಪಟ ದೇಸೀ ಕಥಾವಸ್ತು ಹೊಂದಿರುವ ಧರಣಿ ಚಿತ್ರದಲ್ಲಿ ಕೋಳಿ ಪಂದ್ಯ ಸೇರಿದಂತೆ ಅನೇಕ ಹೊಸ ವಿಚಾರಗಳು ಸೇರಿಕೊಂಡಿವೆ. ಈ ಹಿಂದೆ ಟಕ್ಕರ್ ಸಿನಿಮಾದ ಮೂಲಕ ನಾಯಕನಾಗಿ ಪರಿಚಯಗೊಂಡಿದ್ದ ಮನೋಜ್ ಕುಮಾರ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಶಿವಮೊಗ್ಗ ಜೈಲು, ಚಿಕ್ಕಬಳ್ಳಾಪುರ, ಶ್ರೀನಿವಾಸಪುರ, ಚನ್ನಪಟ್ಟಣ ಸೇರಿದಂತೆ ಅನೇಕ ಜಾಗಗಳಲ್ಲಿ ಚಿತ್ರೀಕರಣಗೊಳ್ಳುತ್ತಿದೆ.
ಇತ್ತೀಚೆಗೆ ಶಿವಮೊಗ್ಗ ಜೈಲಿನಲ್ಲಿ ಬಾರೀ ಹೊಡೆದಾಟದ ದೃಶ್ಯಗಳ ಚಿತ್ರೀಕರಣ ನೆರವೇರಿದೆ. ಮುನ್ನೂರಕ್ಕೂ ಅಧಿಕ ಜ್ಯೂನಿಯರ್ ಕಲಾವಿದರು, ಹತ್ತಾರು ಜನ ಫೈಟರ್ಗಳು, ನಾಯಕ, ನಾಯಕಿ ಸೇರಿದಂತೆ ಹಲವರು ಪಾಲ್ಗೊಂಡಿದ್ದ ದೃಶ್ಯಗಳು ಅದ್ದೂರಿಯಾಗಿ ಸೆರೆಯಾಗಿದೆ. ಸಾಹಸ ದೃಶ್ಯಗಳ ಜೊತೆಗೆ ಒಂದು ಹಾಡನ್ನು ಕೂಡಾ ಇಲ್ಲಿ ಚಿತ್ರೀಕರಿಸಲಾಗಿದೆ. ಸದ್ಯ ಧರಣಿ ಚಿತ್ರತಂಡ ಚನ್ನಪಟ್ಟಣದಲ್ಲಿ ಬೀಡುಬಿಟ್ಟಿದೆ. ರಾಘು ಮೈಸೂರು ನಿರ್ಮಿಸಿರುವ ವಿಶೇಷ ಸೆಟ್ ಮತ್ತು ಹಳ್ಳಿಯ ವಾತಾವರಣದಲ್ಲಿ ಮಾತಿನ ಭಾಗದ ಚಿತ್ರೀಕರಣ ಸಾಗುತ್ತಿದೆ.
ಕೋಳಿ ಪಂದ್ಯದ ಸುತ್ತ ಬೆಸೆದುಕೊಂಡಿರುವ ಈ ಧರಣಿ ಚಿತ್ರದಲ್ಲಿ ಈ ವರೆಗೆ ಎಲ್ಲೂ ಅನಾವರಣಗೊಳ್ಳದ ಸಾಮಾಜಿಕ ವ್ಯವಸ್ಥೆ, ಸಮುದಾಯದ ಸಮಸ್ಯೆಗಳೂ ದೃಶ್ಯ ರೂಪದಲ್ಲಿ ತೆರೆದುಕೊಳ್ಳಲಿದೆ ಅನ್ನೋದು ನಿರ್ದೇಶಕ ಸುಧೀರ್ ಶಾನುಭೋಗ್ ವಿವರಣೆ.
ಶಶಾಂಕ್ ಶೇಷಗಿರಿ ಸಂಗೀತ, ಅರುಣ್ ಸುರೇಶ್ ಛಾಯಾಗ್ರಹಣವಿರುವ ಧರಣಿ ಚಿತ್ರದಲ್ಲಿ ಸಂಪತ್ ಮೈತ್ರೇಯ, ಫ್ರೆಂಚ್ ಬಿರಿಯಾನಿ ಮಹಂತೇಶ್, ಸತ್ಯರಾಜ್, ಮೊದಲಾದವರ ತಾರಾಗಣವಿದೆ. ಇನ್ನೂ ಅನೇಕ ಹೆಸರಾಂತ ಸಿನಿಮಾ ಮತ್ತು ರಂಗಭೂಮಿ ಕಲಾವಿದರು ಈ ಚಿತ್ರದ ಭಾಗವಾಗಲಿದ್ದಾರೆ ಮನೋಜ್ ಅವರಿಗೆ ಜೋಡಿಯಾಗಿ ಹೊಸ ಪ್ರತಿಭೆ ರವೀಕ್ಷಾ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.