ಚಿಕ್ಕಬಳ್ಳಾಪುರ: ನಾಡಹಬ್ಬವೆಂದೇ ಖ್ಯಾತಿಯನ್ನು ಹೊಂದಿರುವ ನಗರದ ಶ್ರೀ ಜಾಲಾರಿ ಗಂಗಮಾಂಭ ದೇವಾಲಯದ ಧರ್ಮರಾಯರ ಹೂವಿನ ಕರಗ ಮಹೋತ್ಸವ ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನವರೆಗೆ ಅಪಾರ ಜನಸ್ತೋಮದ ನಡುವೆ ಅದ್ದೂರಿಯಾಗಿ ನೆರವೇರಿತು.
ಕರಗದ ಪ್ರಯುಕ್ತ ಶನಿವಾರ ಗಂಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಮಹಿಳೆಯರು, ಭಕ್ತರು ಧರ್ಮರಾಯರ ಹಾಗೂ ದ್ರೌಪತಮ್ಮನವರ ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.ಮೇಲೂರಿನ ಕೆ.ಧಮೇರ್ಂದ್ರ ಅವರು ಕರಗವನ್ನು ಹೊತ್ತು ಹೆಜ್ಜೆ ಹಾಕಿದರು. ನಗರದ ವಿವಿಧ ಬಡವಾಣೆಗಳ ಜನರು ರಾತ್ರಿಯಿಡೀ ಸಂಚರಿಸಿದ ಕರಗವನ್ನು ಕಣ್ತುಂಬಿಕೊಂಡರು.
ಕರಗ ವೀಕ್ಷಿಸಲು ಜಿಲ್ಲೆ ಸೇರಿ ಇತರೆ ಜಿಲ್ಲೆಗಳಿಂದ ಸಹಸ್ತ್ರಾರು ಭಕ್ತರು ಆಗಮಿಸಿದ್ದರು.ಕರಗದ ಮೆರವಣಿಗೆಯಲ್ಲಿ ಇಡೀ ರಾತ್ರಿ ಸಂಚರಿಸಿದ ಭಕ್ತರು ನಾಡಿಗೆ ಯಾವುದೇ ರೀತಿ ಕೇಡು ಉಂಟಾಗದಂತೆ, ಶಾಂತಿ ಸಮೃದ್ಧಿಯಿಂದ ತುಂಬಿರಲಿ, ಪ್ರಸ್ತತ ಕಾಡುತ್ತಿರುವ ಬರದಿಂದ ಮುಕ್ತಿ ಪಡೆದು ಜನಜಾನುವಾರು ಮಳೆ ಬೆಳೆಯೊಂದಿಗೆ ಸಮೃದ್ಧವಾದ ಜೀವನ ನಡೆಸಲೆಂದು ಹಾರೈಸಿ ಗ್ರಾಮ ದೇವತೆಯನ್ನು ಪ್ರಾರ್ಥಿಸಿದರು.
ಕರಗದ ಅಂಗವಾಗಿ ನಗರದ ಪ್ರಮುಖ ರಸ್ತೆಗಳು, ವೃತ್ತಗಳನ್ನು ವಿದ್ಯುತ್ ದೀಪಾಂಲಕಾರದಿಂದ ಸಿಂಗಾರಗೊಳಿಸಲಾಗಿತ್ತು. ನಗರವಿಡೀ ಹಬ್ಬದ ವಾತಾವರಣದೊಂದಿಗೆ ನಾನಾ ಕಡೆಗಳಲ್ಲಿ ಆಯೋಜಿಸಿದ್ದ ವಾದ್ಯಗೋಷ್ಠಿ, ಸಂಗೀತ ಕಾರ್ಯಕ್ರಮಗಳು ಸಾಂಸ್ಕøತಿಕ ಲೋಕವನ್ನೇ ಸೃಷ್ಠಿಸಿದಂತಿತ್ತು. ನಗರದ ವಿವಿಧೆಡೆ ಕರಗ ಕುಣಿತಕ್ಕೆ ವಿಶೇಷ ವೇದಿಕೆ ಸಜ್ಜುಗೊಳಿಸಲಾಗಿತ್ತು.ಕರಗ ಕುಣಿತವನ್ನು ಅನೇಕ ಭಕ್ತರು ತಮ್ಮ ಮೊಬೈಲ್ ನ್ಗಳಲ್ಲಿ ಸೆರೆ ಹಿಡಿದರು.