ನವದೆಹಲಿ: ವಿಶ್ವಕಪ್ ವಿಜೇತ ಭಾರತ ತಂಡದ ನಾಯಕರಾಗಿದ್ದ ಮಹೇಂದ್ರಸಿಂಗ್ ಧೋನಿ ಅವರು ಧರಿಸುತ್ತಿದ್ದ ‘7’ ಸಂಖ್ಯೆಯ ಪೋಷಾಕಿಗೆ ‘ವಿಶ್ರಾಂತಿ’ ಘೋಷಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ.
ಧೋನಿಯ ಸಾಧನೆಗಳನ್ನು ಗುರುತಿಸಿ ಗೌರವಾರ್ಥವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.ಇದರೊಂದಿಗೆ ಇನ್ನು ಮುಂದೆ ಬೇರೆ ಯಾವುದೇ ಕ್ರಿಕೆಟಿಗನೂ ಈ ಸಂಖ್ಯೆಯ ಪೋಷಾಕನ್ನು ಧರಿಸುವಂತಿಲ್ಲ.ಧೋನಿ 2019ರಲ್ಲಿ ಇಂಗ್ಲೆಂಡ್ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಆಡಿದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಕಣಕ್ಕಿಳಿದಿರಲಿಲ್ಲ. 2020ರ ಆಗಸ್ಟ್ 15ರಂದು ಅವರು ನಿವೃತ್ತಿ ಘೋಷಿಸಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನಾಯಕರಾಗಿ ಮುಂದುವರಿದಿದ್ದಾರೆ.
ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು 2013ರಲ್ಲಿ ನಿವೃತ್ತರಾಗಿದ್ದರು. ಅವರು 10 ಸಂಖ್ಯೆಯ ಪೋಷಾಕು ಧರಿಸುತ್ತಿದ್ದರು. ಅವರ ನಿವೃತ್ತಿಯ ನಂತರ ಯಾರೂ ಈ ಸಂಖ್ಯೆಯ ಜೆರ್ಸಿ ಧರಿಸಿರಲಿಲ್ಲ. ಆದರೆ, 2017ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಶಾರ್ದೂಲ್ ಠಾಕೂರ್ ಕೂಡ ಇದೇ ಸಂಖ್ಯೆಯ ಪೋಷಾಕು ಧರಿಸಿದ್ದರು. ಆಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಆಗ ಅವರ ಜೆರ್ಸಿಗೆ (10) ವಿಶ್ರಾಂತಿ ನೀಡಿ ಗೌರವಿಸಲಾಗಿತ್ತು.