ಭಾರತದ ಫ್ರೀಸ್ಟೈಲ್ ಕುಸ್ತಿಪಟುಗಳಿಗೆ ಏಷ್ಯನ್ ಒಲಿಂಪಿಕ್ ಅರ್ಹತಾ ಟೂರ್ನಿಯ ಮೊದಲ ದಿನವಾದ ಶುಕ್ರವಾರ ನಿರಾಸೆ ಕಾದಿತ್ತು. ಅಮನ್ ಸೆಹ್ರಾವತ್ ಅವರು ಸೆಮಿಫೈನಲ್ನಲ್ಲಿ ಸೋಲುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ಅವಕಾಶ ಕಳೆದುಕೊಂಡರು.
ತೂಕ ನೋಡುವ ವೇಳೆಗೆ ಹಾಜರಾಗದ ಕಾರಣ ದೀಪಕ್ ಪೂನಿಯಾ ಮತ್ತು ಸುಜಿತ್ ಕಲ್ಕಲ್ ಅವರಿಗೆ ಈ ಕೂಟದಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಲಾಯಿತು. 57 ಕೆ.ಜಿ. ವಿಭಾಗದಲ್ಲಿ ಪಾಲ್ಗೊಂಡ ಅಮನ್, ಕ್ರಮವಾಗಿ ಯೆರಾಸಿಲ್ ಮುಖ್ತಾರುಲಿ ಮತ್ತು ಸುಂಗವಾನ್ ಕಿಮ್ ಅವರನ್ನು ತಾಂತ್ರಿಕ ಕೌಶಲದ ಆಧಾರದಲ್ಲಿ ಸೋಲಿಸಿ ಭರ್ಜರಿ ಆರಂಭ ಮಾಡಿದ್ದರು.
ಆದರೆ ಉಜ್ಬೇಕಿಸ್ತಾನದ ಗುಲಾಮ್ಜಾನ್ ಅಬ್ದುಲ್ಲಾಯೆವ್ ಅವರಿಗೆ ಪಾಯಿಂಟ್ ಆಧಾರದಲ್ಲಿ ಸೋತರು. ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ಕುಸ್ತಿಪಟು ಒಲಿಂಪಿಕ್ಸ್ಗೆ ಕೋಟಾ ಮೂಲಕ ಅವಕಾಶ ಪಡೆಯುವ ನಿರೀಕ್ಷೆಯಿತ್ತು. ಆದರೆ ಅಂತಿಮವಾಗಿ ನಿರಾಸೆ ಮೂಡಿಸಿದರು.74 ಕೆ.ಜಿ. ವಿಭಾಗದಲ್ಲಿ ಜೈದೀಪ್ ಅವರೂ ಉತ್ತಮ ಆರಂಭ ಮಾಡಿದ್ದರು. ತುರ್ಕಮೆನಿಸ್ತಾನದ ಅಲ್ ಅರ್ಸ್ಲಾನ್ ಬೆಗೆನ್ಜೊಯ್ ಅವರ ಮೇಲೆ ಜಯಗಳಿಸಿದ ಜೈದೀಪ್, ನಂತರ ಕಿರ್ಗಿಸ್ತಾನದ ಒರೊಜೊಬೆಕ್ ಟೊಕ್ಟೊಮಮಬೆಟೆವ್ ಅವರಿಗೆ ಶರಣಾದರು.