ಬೆಂಗಳೂರು: ವಿಧಾನಸಭೆ ವಿಪಕ್ಷನಾಯಕನ ಸ್ಥಾನ ಉತ್ತರಕರ್ನಾಟಕ ಭಾಗಕ್ಕೆ ಸಿಗಲಿಲ್ಲ ಎಂದು ಅಸಮಾಧಾನಗೊಂಡಿರುವವರನ್ನು ಸಮಾಧಾನ ಪಡಿಸುತ್ತೇವೆ ಎಂದು ವಿಧಾನಸಭೆ ವಿಪಕ್ಷನಾಯಕರಾಗಿ ಆಯ್ಕೆಯಾಗಿರುವ ಬಿಜೆಪಿ ಹಿರಿಯ ಮುಖಂಡ ಆರ್. ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇದುವರೆಗೂ ಪಕ್ಷದ ವತಿಯಿಂದ ಮುಖ್ಯಮಂತ್ರಿಯಾಗಿರುವವರು ಹೆಚ್ಚಿನವರು ಉತ್ತರಕರ್ನಾಟಕದವರಾಗಿದ್ದಾರೆ. ಜಗದೀಶ್ ಶೆಟ್ಟರ್ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದರು. ಕರಾವಳಿ ಭಾಗದಿಂದ ಡಿ.ವಿ.ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದರು.
ಮಧ್ಯ ಕರ್ನಾಟಕದಿಂದ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರು. ಹಳೆ ಮೈಸೂರು ಭಾಗಕ್ಕೆ ಇದುವರೆಗೆ ಪ್ರಾತಿನಿಧ್ಯ ದೊರಕಿರಲಿಲ್ಲ ಇದೀಗ ಹಳೆ ಮೈಸೂರು ಭಾಗಕ್ಕೆ ಪ್ರಾತಿನಿಧ್ಯ ದೊರೆತಿದ್ದು, ಈ ಭಾಗದವರು ವಿಪಕ್ಷನಾಯಕರಾಗಿದ್ದೇವೆ. ಇದನ್ನು ಅಸಮಾಧಾನಗೊಂಡಿರುವವರಿಗೆ ಮನವರಿಕೆ ಮಾಡಿ ಸಮಾಧಾನ ಪಡಿಸುತ್ತೇವೆ ಎಂದು ಅಶೋಕ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ತಪ್ಪು ಮಾಡಿದಾಗ ಕಿವಿ ಹಿಂಡುವ ಕೆಲಸ ಮಾಡುತ್ತೇವೆ. ಇನ್ನಷ್ಟು ಜಾಸ್ತಿ ಮಾಡಿದರೆ ಸರ್ಕಾರವನ್ನು ಕಿತ್ತೊಗೆಯುತ್ತೇವೆ ಎಂದು ಅವರು ಹೇಳಿದ್ದಾರೆ.