ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೈತರು ವ್ಯವಸಾಯದ ಜೊತೆಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಇವರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರದಿಂದ ದೊರಕುವ ಎಲ್ಲಾ ಸೌಲಭ್ಯಗಳನ್ನು ನೇರವಾಗಿ ತಲುಪಿಸಲು ಕ್ರಮ ವಹಿಸುತ್ತೇನೆ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರೈತರಿಗೆ ಮೇವು ಕತ್ತರಿಸುವ ಯಂತ್ರ ವಿತರಣೆ ಮಾಡಿ ಅವರು ಮಾತನಾಡಿದರು.ಕ್ಷೇತ್ರ ವ್ಯಾಪ್ತಿಯಲ್ಲಿ ಹೈನುಗಾರಿಕೆಯಿಂದ ಪ್ರತಿ ದಿನ ರೈತರುಗಳು 65 ಸಾವಿರ ಲೀ ಹಾಲು ಉತ್ಪಾದನೆ ಮಾಡುತ್ತಿದ್ದಾರೆ . ಹಾಲು ಉತ್ಪಾದನೆಯನ್ನು ಹೆಚ್ಚು ಮಾಡಲು ರೈತರಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಕ್ಷೇತ್ರದ ವ್ಯಾಪ್ತಿಯ ಅಜ್ಜಿಪುರ ಗುಂಡಾಪುರ ಹಾಗೂ ಇನ್ನಿತರ ಕಡೆಗಳಲ್ಲಿ ಮಾತ್ರ ಹೆಚ್ಚಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಅರಣ್ಯ ಇಲಾಖೆಯವರು ಸಹಕಾರ ನೀಡಿದರೆ ಇನ್ನೂ ಸಹ ಹೆಚ್ಚು ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಪಶುವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳ ಕೊರತೆ ಇರುವುದರಿಂದ ರೈತರಿಗೆ ಅನಾನುಕೂಲವಾಗುತ್ತಿದೆ. ಪಶು ಸಂಗೋಪನಾ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ ವೆಂಕಟೇಶ್ ರವರು ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರವಾಸ ಹಮ್ಮಿಕೊಂಡಿದ್ದಾರೆ .
ಇವರಿಗೆ ಮನವರಿಗೆ ಮಾಡಿ ಹೆಚ್ಚು ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ಮನವಿ ಮಾಡಲಾಗುವುದು . ಇದಲ್ಲದೆ ಮಲೆ ಮಹದೇಶ್ವರ ಬೆಟ್ಟ ಪೊನ್ನಾಚಿ ಕುರಟ್ಟಿ ಹೊಸೂರು ಗೋಪಿನಾಥಂ ಗ್ರಾಮಗಳ ಕಡೆ ನಾಟಿ ಹಸುಗಳನ್ನು ಕಾಪಾಡಿಕೊಳ್ಳಲು ಪಶು ಆಸ್ಪತ್ರೆ ತೆರೆಯುವಂತೆ ಮನವಿ ಮಾಡಲಾಗುವುದು ಎಂದರು.
ಕಾಡಂಚಿನ ಪ್ರದೇಶಗಳಲ್ಲಿ ಮೇವಿನ ಕೊರತೆ ಇರುವುದು ಕಂಡು ಬಂದಿದೆ .ಕೃಷಿ ಇಲಾಖೆ ಹಾಗೂ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸರ್ಕಾರದಿಂದ ಆದೇಶವಾಗಿದ್ದರೆ ತಕ್ಷಣ ಗೋಶಾಲೆ ತೆರೆಯಲು ಸೂಚನೆ ನೀಡುತ್ತೇನೆ ಎಂದರು.ಮೂವರು ರೈತರಿಗೆ 33 ಸಾವಿರ ವೆಚ್ಚದ ಮೇವು ಕತ್ತರಿಸುವ ಯಂತ್ರವನ್ನು ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿ ಡಾ ಸಿದ್ದರಾಜು, ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಕಚೇರಿ ಸಿಬ್ಬಂದಿ ರಾಜಣ್ಣ ಯುವ ಮುಖಂಡ ಆಮೀನ್ ಸೇರಿದಂತೆ ಫಲಾನುಭವಿಗಳು ಹಾಜರಿದ್ದರು.